ಮಧ್ಯಪ್ರದೇಶ | ಚಲಿಸುತ್ತಿದ್ದ ಬಸ್ ನಲ್ಲಿ ಲೈಂಗಿಕ ಕಿರುಕುಳಕ್ಕೆ ಯತ್ನ: ಬಸ್ ನಿಂದ ಜಿಗಿದ ಬಾಲಕಿಯರು

ಸಾಂದರ್ಭಿಕ ಚಿತ್ರ (credit: Grok)
ದಮೋಹ್: ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಬಾಲಕಿಯರಿಗೆ ಆಶ್ಲೀಲವಾಗಿ ನಿಂದಿಸಿ, ಅವರಿಗೆ ಲೈಂಗಿಕ ಕಿರುಕುಳ ನೀಡಲು ಬಸ್ ನಿರ್ವಾಹಕ ಸೇರಿ ನಾಲ್ವರು ಯತ್ನಿಸಿರುವ ಘಟನೆ ಮಧ್ಯಪ್ರದೇಶದ ದಮೋಹ್ ಜಿಲ್ಲೆಯಲ್ಲಿ ನಡೆದಿದ್ದು, ಈ ವೇಳೆ ಅವರ ಕಿರುಕುಳದಿಂದ ತಪ್ಪಿಸಿಕೊಳ್ಳವಲು ಬಾಲಕಿಯರು ಬಸ್ ನಿಂದ ಹೊರಗೆ ಜಿಗಿದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೋಮವಾರ ಬೆಳಗ್ಗೆ ಈ ಘಟನೆ ನಡೆದಿದ್ದು, ಗಾಯಗೊಂಡಿರುವ ಬಾಲಕಿಯರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯ ಕುರಿತು ಮಾಹಿತಿ ನೀಡಿರುವ ಉಪ ಪೊಲೀಸ್ ವರಿಷ್ಠಾಧಿಕಾರಿ ಭಾವನಾ, “ಒಂಬತ್ತನೇ ತರಗತಿ ಓದುತ್ತಿರುವ ಇಬ್ಬರು ವಿದ್ಯಾರ್ಥಿನಿಯರು ಅದ್ರೋಟಾದಿಂದ ಬಸ್ ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಬಸ್ ನ ಚಾಲಕ, ನಿರ್ವಾಹಕ ಹಾಗೂ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಇನ್ನಿಬ್ಬರು ಅವರನ್ನು ಅಶ್ಲೀಲವಾಗಿ ನಿಂದಿಸಿದ್ದಾರೆ. ನಂತರ, ಬಸ್ ನ ಹಿಂಬದಿ ಬಾಗಿಲನ್ನು ಮುಚ್ಚಿದ್ದಾರೆ. ಇದರಿಂದ ಆತಂಕಕ್ಕೊಳಗಾಗಿರುವ ಬಾಲಕಿಯರು ಬಸ್ ನಿಲ್ಲಿಸುವಂತೆ ಮನವಿ ಮಾಡಿದ್ದಾರೆ. ಆದರೆ, ಬಸ್ ನಿಲ್ಲಿಸುವುದಿಲ್ಲ ಎಂದು ಅರಿತ ಬಾಲಕಿಯರು ತಮ್ಮ ಸುರಕ್ಷತೆಯ ದೃಷ್ಟಿಯಿಂದ ಬಸ್ ನಿಂದ ಹೊರಗೆ ಜಿಗಿದಿದ್ದಾರೆ” ಎಂದು ಹೇಳಿದ್ದಾರೆ.
ಈ ಸಂಬಂಧ ಪೋಕ್ಸೊ ಕಾಯ್ದೆಯಡಿ ಚಾಲಕ ಮುಹಮ್ಮದ್ ಆಶಿಕ್, ನಿರ್ವಾಹಕ ಬನ್ಶಿಲಾಲ್, ಹುಕುಮ್ ಸಿಂಗ್ ಹಾಗೂ ಮಾಧವ್ ಅಸತಿ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ್ ಮಿಶ್ರಾ ತಿಳಿಸಿದ್ದಾರೆ.