ಪರೀಕ್ಷಾರ್ಥ ಚಾಲನೆ ವೇಳೆ ಇಬ್ಬರು ವಿದ್ಯಾರ್ಥಿನಿಯರ ಮೇಲೆ ಹರಿದ ರೈಲು
ತನಿಖೆಗೆ ಆದೇಶಿಸಿದ ರೈಲ್ವೆ ಸಚಿವ
ಸಾಂದರ್ಭಿಕ ಚಿತ್ರ (PTI)
ಇಂದೋರ್: ಮಧ್ಯಪ್ರದೇಶದ ಇಂದೋರ್ ನಲ್ಲಿ ಪರೀಕ್ಷಾರ್ಥ ಚಾಲನೆ ನಡೆಸುವಾಗ ರೈಲೊಂದು ಇಬ್ಬರು ಹತ್ತನೆ ತರಗತಿ ವಿದ್ಯಾರ್ಥಿನಿಯರ ಮೇಲೆ ಹರಿದ ಪರಿಣಾಮ ಅವರಿಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಕುರಿತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತನಿಖೆಗೆ ಆದೇಶಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಹೊಸದಾಗಿ ನಿರ್ಮಾಣಗೊಂಡಿದ್ದ ಹಳಿಯ ಮೇಲೆ ರೈಲು ಪರೀಕ್ಷಾರ್ಥ ಚಾಲನೆ ನಡೆಸುವಾಗ ಕೈಲೋಡ್ ಹಲಾ ಬಳಿ ಗುರುವಾರ 17 ವರ್ಷ ವಯಸ್ಸಿನ ಬಬ್ಲಿ ಮಸಾರೆ ಹಾಗೂ ರಾಧಿಕಾ ಭಾಸ್ಕರ್ ಎಂಬ ವಿದ್ಯಾರ್ಥಿನಿಯರು ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
“ಬಾಲಕಿಯರು ಹಳಿಗಳನ್ನು ದಾಟಿಕೊಂಡು ಮನೆಯತ್ತ ಹೊರಟಿದ್ದರು. ಇದೇ ಪ್ರಥಮ ಬಾರಿಗೆ ಈ ಮಾರ್ಗದಲ್ಲಿ ರೈಲೊಂದು ಸಂಚರಿಸಿತ್ತು. ಇದಾದ ನಂತರ, ಮಧ್ಯಪ್ರದೇಶ ಸಚಿವ ಹಾಗೂ ಸ್ಥಳೀಯ ಶಾಸಕ ತುಳಸಿರಾಮ್ ಅಪಘಾತದ ಕುರಿತು ರೈಲ್ವೆ ಸಚಿವರಿಗೆ ಮಾಹಿತಿ ನೀಡಿದ್ದು, ಈ ಕುರಿತು ತನಿಖೆ ನಡೆಸುವಂತೆ ರತ್ಲಮ್ ನ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಿಗೆ ರೈಲ್ವೆ ಸಚಿವರು ಸೂಚಿಸಿದ್ದಾರೆ” ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಘಟನೆಯ ಕುರಿತು ರೈಲ್ವೆ ರಕ್ಷಣಾ ಪಡೆಯಿಂದ ವಿಸ್ತೃತ ತನಿಖೆ ನಡೆಸಲಾಗುವುದು ಎಂದು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ರಜನೀಶ್ ಕುಮಾರ್ ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
“ಹಳಿಯನ್ನು ದ್ವಿಪಥಗೊಳಿಸಿದ ನಂತರ ಜನರಿಗೆ ವಿವಿಧ ವಿಧಾನಗಳ ಮೂಲಕ ಕಳೆದ ಎರಡು ದಿನಗಳಿಂದ ರೈಲಿನ ಪರೀಕ್ಷಾರ್ಥ ಚಾಲನೆಯ ಕುರಿತು ಎಚ್ಚರಿಕೆ ನೀಡಲಾಗಿತ್ತು. ಯಾವುದೇ ಅನಧಿಕೃತ ಮಾರ್ಗದ ಮೂಲಕ ಹಳಿಯ ಮೇಲೆ ಬರಬಾರದು ಎಂದು ಅವರಿಗೆ ಸೂಚಿಸಲಾಗಿತ್ತು” ಎಂದು ಅವರು ಮಾಹಿತಿ ನೀಡಿದ್ದಾರೆ.