ಬುಡಕಟ್ಟು ಜನಾಂಗದ ಇಬ್ಬರನ್ನು ಅಕ್ರಮವಾಗಿ ಕೂಡಿಹಾಕಿ ಹಲ್ಲೆ
ಸಾಂದರ್ಭಿಕ ಚಿತ್ರ \ Photo: PTI
ಇಂಧೋರ್: ಒಬ್ಬ ಬಾಲಕ ಸೇರಿದಂತೆ ಬುಡಕಟ್ಟು ಜನಾಂಗದ ಇಬ್ಬರನ್ನು ಕ್ಷುಲ್ಲಕ ಕಾರಣಕ್ಕೆ ಕೂಡಿ ಹಾಕಿ ಅಮಾನುಷವಾಗಿ ಥಳಿಸಿದ ಘಟನೆ ಇಂದೋರ್ ನಿಂದ ವರದಿಯಾಗಿದೆ. ಈ ಸಂಬಂಧ ಮೂವರನ್ನು ಬಂಧಿಸಲಾಗಿದೆ.
ಘಟನೆ ಕುರಿತ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಈ ಸಂಬಂಧ ಸುಮಿತ್ ಚೌಧರಿ, ಜೈಪಾಲ್ ಸಿಂಗ್ ಬಘೇಲ್ ಮತ್ತು ಪ್ರೇಮ್ ಸಿಂಗ್ ಪರ್ಮಾರ್ ಅವರನ್ನು ಬಂಧಿಸಲಾಗಿದೆ.
ಸಿಂಧಿ ಜಿಲ್ಲೆಯಲ್ಲಿ ಬುಡಕಟ್ಟು ವ್ಯಕ್ತಿಯೊಬ್ಬರ ಮೇಲೆ ಮೂತ್ರ ವಿಸರ್ಜಿಸಿದ ಹಳೆಯ ವಿಡಿಯೊ ವೈರಲ್ ಆದ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಿದ ಬೆನ್ನಲ್ಲೇ ಇಂಥ ಮತ್ತೊಂದು ಪ್ರಕರಣ ವರದಿಯಾಗಿದೆ. ಈ ಘಟನೆ ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿಗೆ ತೀವ್ರ ಮುಜುಗರ ತಂದಿತ್ತು.
ರವು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೋಟರ್ ಸೈಕಲ್ ಅಪಘಾತದಲ್ಲಿ 18 ವರ್ಷದ ಯುವಕ ಹಾಗೂ 15 ವರ್ಷದ ಆತನ ತಮ್ಮ ಗಾಯಗೊಂಡು ರಸ್ತೆ ಮೇಳೆ ಬಿದ್ದಿದ್ದರು. ಈ ಅಪಘಾತ ಆರೋಪಿಗಳ ಜತೆ ವಾಗ್ವಾದಕ್ಕೆ ಕಾರಣವಾಯಿತು. ಆರೋಪಿಗಳು ಇಬ್ಬರನ್ನು ಭದ್ರತಾ ಸಿಬ್ಬಂದಿಯ ಕೊಠಡಿಯಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿದರು. ಬಳಿಕ ಬೆಳಿಗ್ಗೆ ಸಂತ್ರಸ್ತರನ್ನು ಬಿಡುಗಡೆ ಮಾಡಲಾಯಿತು. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ದೇಹಸ್ಥಿತಿ ಸ್ಥಿರವಾಗಿದೆ ಎಂದು ಡಿಸಿಪಿ ಆದಿತ್ಯ ಮಿಶ್ರಾ ಹೇಳಿದ್ದಾರೆ.
ಆರೋಪಿಗಳ ವಿರುದ್ಧ ಭಾರತೀಯ ದಂಡಸಂಹಿತೆಯ ವಿವಿಧ ಸೆಕ್ಷನ್ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ವ್ಯಕ್ತಿಗಳ (ದೌರ್ಜನ್ಯ ತಡೆ) ಕಾಯ್ದೆ ಹಾಗೂ ಬಾಲನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಈ ಈ ಪ್ರಕರಣದಲ್ಲಿ ಇತರ ಕೆಲವರೂ ಷಾಮೀಲಾಗಿದ್ದು, ಅವರ ಪತ್ತೆಗೂ ಶೋಧ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.