ದ್ವಿಚಕ್ರ ವಾಹನ ತಯಾರಕರು ತಮ್ಮ ಖರೀದಿದಾರರಿಗೆ ರಿಯಾಯಿತಿ ದರದಲ್ಲಿ ಹೆಲ್ಮೆಟ್ ಒದಗಿಸಬೇಕು : ಗಡ್ಕರಿ
ನಿತಿನ್ ಗಡ್ಕರಿ | PC : PTI
ಹೊಸದಿಲ್ಲಿ : ಹೆಲ್ಮೆಟ್ಗಳನ್ನು ಧರಿಸಿರಲಿಲ್ಲ ಎಂಬ ಕಾರಣದಿಂದಾಗಿಯೇ ಹಲವಾರು ಜನರು ರಸ್ತೆ ಅಪಘಾತಗಳಲ್ಲಿ ಬಲಿಯಾಗುತ್ತಿರುವುದರಿಂದ ದ್ವಿಚಕ್ರ ವಾಹನಗಳ ತಯಾರಕರು ವಾಹನಗಳ ಖರೀದಿದಾರರಿಗೆ ರಿಯಾಯಿತಿ ಅಥವಾ ಸಮಂಜಸವಾದ ದರಗಳಲ್ಲಿ ಹೆಲ್ಮೆಟ್ ಒದಗಿಸಬೇಕು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಬುಧವಾರ ಇಲ್ಲಿ ಹೇಳಿದರು.
ಇಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು,2022ರಲ್ಲಿ ದೇಶದಲ್ಲಿ ಹೆಲ್ಮೆಟ್ ಧರಿಸಿರದಿದ್ದ 50,029 ಜನರು ಅಪಘಾತಗಳಲ್ಲಿ ತಮ್ಮ ಜೀವಗಳನ್ನು ಕಳೆದುಕೊಂಡಿದ್ದಾರೆ ಎಂದು ತಿಳಿಸಿದರು.
‘ನಾನು ದ್ವಿಚಕ್ರ ವಾಹನ ತಯಾರಕರನ್ನು ಕೋರಿಕೊಳ್ಳಲು ಚಿಂತಿಸುತ್ತಿದ್ದೇನೆ. ಅವರು ವಾಹನ ಖರೀದಿದಾರರಿಗೆ ರಿಯಾಯಿತಿ ದರಗಳಲ್ಲಿ ಹೆಲ್ಮೆಟ್ ನೀಡಿದರೆ ನಾವು ಜನರ ಜೀವಗಳನ್ನು ಉಳಿಸಬಹುದು’ ಎಂದರು.
ಶಾಲಾ ಬಸ್ಗಳಿಗಾಗಿ ಪಾರ್ಕಿಂಗ್ ವ್ಯವಸ್ಥೆಯನ್ನು ರೂಪಿಸುವ ಅಗತ್ಯಕ್ಕೂ ಗಡ್ಕರಿ ಒತ್ತು ನೀಡಿದರು.
ಮೋಟರ್ ವಾಹನಗಳ (ತಿದ್ದುಪಡಿ) ಕಾಯ್ದೆ,2019 ಸಂಚಾರ ಅಪರಾಧಗಳಿಗೆ ಭಾರೀ ದಂಡಗಳನ್ನು ಒಳಗೊಂಡಿದೆ, ಆದರೆ ವಾಸ್ತವದಲ್ಲಿ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನ ದೊಡ್ಡ ಸವಾಲು ಆಗಿದೆ ಎಂದರು.