ಒಡಿಶಾ | ಮಾವಿನ ಓಟೆಯ ಗಂಜಿ ಸೇವಿಸಿ ಇಬ್ಬರು ಮೃತ್ಯು, 6 ಮಂದಿ ಗಂಭೀರ
Photo : deccanchronicle.com
ಭುವನೇಶ್ವರ: ಒಡಿಶಾದ ಕಂಧಮಾಲ್ ಜಿಲ್ಲೆಯಲ್ಲಿ ಮಾವಿನ ಓಟೆಯಿಂದ ತಯಾರಿಸಿದ ಗಂಜಿ ಸೇವಿಸಿ ಇಬ್ಬರು ಮಹಿಳೆಯರು ಮೃತಪಟ್ಟಿದ್ದು, ಆರು ಮಂದಿಯ ಸ್ಥಿತಿ ಗಂಭೀರವಾಗಿದೆ. ದರಿಂಗ್ಬಾಡಿ ಬ್ಲಾಕ್ ವ್ಯಾಪ್ತಿಯ ಮಂಡಿಪಂಕ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಸರ್ಕಾರದ ಪಡಿತರ ವ್ಯವಸ್ಥೆ ಇದ್ದರೂ ಮಂಡಿಪಂಕ ಪ್ರದೇಶದ ಅನೇಕ ಬುಡಕಟ್ಟು ಸಮುದಾಯಗಳು ತಮ್ಮ ಸಾಂಪ್ರದಾಯಿಕ ಆಹಾರ ಪದ್ಧತಿಗಳ ಭಾಗವಾಗಿ ತಮ್ಮ ಆಹಾರದಲ್ಲಿ ಮಾವಿನ ಓಟೆ ಮತ್ತು ಬಿದಿರಿನ ಹೂವುಗಳನ್ನು ಸೇರಿಸುವುದನ್ನು ಮುಂದುವರೆಸಿದ್ದಾರೆ.
ವರದಿಗಳ ಪ್ರಕಾರ, ಮಾವಿನ ಓಟೆಯ ಗಂಜಿ ಸೇವಿಸಿದ ನಂತರ ಮಹಿಳೆಯರು ತೀವ್ರ ಹೊಟ್ಟೆ ನೋವು ಮತ್ತು ಅಸ್ವಸ್ಥತೆಯನ್ನು ಅನುಭವಿಸಿದ್ದಾರೆ. ಆರಂಭದಲ್ಲಿ ಅವರಿಗೆ ಸ್ಥಳೀಯ ಗೊದಾಪುರ್ ಸಮುದಾಯ ಆರೋಗ್ಯ ಕೇಂದ್ರದಲ್ಲಿ (CHC) ಚಿಕಿತ್ಸೆ ನೀಡಲಾಯಿತು. ನಂತರ ಅವರ ಆರೋಗ್ಯ ಸ್ಥಿತಿಯು ಹದಗೆಟ್ಟಾಗ ಅವರನ್ನು ಬರ್ಹಾಂಪುರದ MKCG ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ವರ್ಗಾಯಿಸಲಾಯಿತು ಎಂದು ತಿಳಿದು ಬಂದಿದೆ.
ಮೃತಪಟ್ಟ ಇಬ್ಬರ ಪೈಕಿ ಮಹಿಳೆಯೊಬ್ಬರು ಚಿಕಿತ್ಸೆ ಪಡೆಯುತ್ತಿದ್ದಾಗ ಮೃತಪಟ್ಟರು, ಯುವತಿಯು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಕೊನೆಯುಸಿರೆಳೆದರು. ಸಾವಿಗೆ ನಿಖರವಾದ ಕಾರಣವನ್ನು ವೈದ್ಯರು ಇನ್ನೂ ದೃಢೀಕರಿಸದಿದ್ದರೂ, ಸ್ಥಳೀಯರು ಮಾವಿನ ಓಟೆಯ ಗಂಜಿಯ ಸೇವನೆಯಿಂದ ಫುಡ್ ಪಾಯಿಸನ್ ಶಂಕೆ ವ್ಯಕ್ತಪಡಿಸಿದ್ದಾರೆ.
“ಇಲ್ಲಿನ ಜನರು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್ಎಫ್ಎಸ್ಎ) ವ್ಯಾಪ್ತಿಗೆ ಒಳಪಟ್ಟಿದ್ದಾರೆ. ಕಾನೂನಿನ ಪ್ರಕಾರ ಅಕ್ಕಿ ಪಡೆಯುತ್ತಿದ್ದಾರೆ. ಅವರು ತಮ್ಮ ಸಾಂಪ್ರದಾಯಿಕ ಆಹಾರ ಪದ್ಧತಿಗಳನ್ನು ಸಂರಕ್ಷಿಸಲು ಮಾವಿನ ಓಟೆ ಮತ್ತು ಬಿದಿರಿನ ಹೂವುಗಳನ್ನು ಸೇವಿಸುವುದನ್ನು ಮುಂದುವರೆಸಿದ್ದಾರೆ. ಕೆಲವರು ಮಾವಿನ ಓಟೆ ತಿನ್ನುವುದನ್ನು ನಿಲ್ಲಿಸಿದ್ದಾರೆ. ಆದರೆ ಇನ್ನೂ ಕೆಲವರು ನಮ್ಮ ಸಾಂಸ್ಕೃತಿಕ ಪರಂಪರೆಯ ಭಾಗವಾಗಿ ಮಾವಿನ ಓಟೆಯಿಂದ ತಯಾರಿಸಿದ ಭಕ್ಷ್ಯಗಳನ್ನು ಸವಿಯುವುದು ಇಷ್ಟಪಡುತ್ತಾರೆ ಎಂದು ಗಡಾಪುರ ಗ್ರಾಮ ಪಂಚಾಯಿತಿಯ ಸರಪಂಚರಾದ ಕುಮಾರಿ ಮಲ್ಲಿಕ್ ಹೇಳಿದರು.
ಮಾವಿನ ಓಟೆಯ ಭಕ್ಷ್ಯಗಳನ್ನು ತಾಜಾವಾಗಿ ಸೇವಿಸದಿದ್ದರೆ ಅದು ಫುಡ್ ಪಾಯಿಸನ್ ಆಗುವ ಸಾಧ್ಯತೆ ಹೆಚ್ಚು. ಭಕ್ಯಗಳನ್ನು ತಯಾರಿಸುವಾಗ ಶುದ್ಧತೆ ಕಾಪಾಡದಿದ್ದರೆ ಅದು ವಿಷಕಾರಿಯಾಗಬಹುದು ಎಂದು ಬುಡಕಟ್ಟು ಸಮುದಾಯದ ಸದಸ್ಯರು ವಿವರಿಸುತ್ತಾರೆ.
ಮಾವಿನ ಓಟೆ ಸೇವನೆ ಸಾಂಪ್ರದಾಯಿಕ ಆಹಾರ ಪದ್ಧತಿ:
"ತರಕಾರಿಗಳು ಮತ್ತು ಇತರ ಅಗತ್ಯ ವಸ್ತುಗಳನ್ನು ಖರೀದಿಸಲು ಸೀಮಿತ ಸಂಪನ್ಮೂಲಗಳ ಕಾರಣದಿಂದಾಗಿ, ದಕ್ಷಿಣ ಒಡಿಶಾದ ಸ್ಥಳೀಯರು ಹುಲ್ಲು, ಅಣಬೆಗಳು, ಕಾಳುಗಳು ಮತ್ತು ಮಾವಿನ ಓಟೆಗಳಂತಹ ಅರಣ್ಯ ಉತ್ಪನ್ನಗಳ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ ಎಂದು ಕೆಲವರು ಹೇಳುತ್ತಾರೆ. ವಾಸ್ತವವಾಗಿ ಹಾಗಲ್ಲ. ನಮ್ಮ ಪೂರ್ವಜರು ಸಾಂಪ್ರದಾಯಿಕವಾಗಿ ಈ ಅರಣ್ಯ ಉತ್ಪನ್ನಗಳನ್ನು ಆಹಾರವಾಗಿ ಸೇವಿಸುತ್ತಿದ್ದರು. ಇಂದು ಜನರು ಅವುಗಳನ್ನು ಸರಿಯಾಗಿ ತಯಾರಿಸದೆ ಸೇವಿಸಿದಾಗ ಅನಿರೀಕ್ಷಿತ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ,” ಎಂದು ಎಂಕೆಸಿಜಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಯ ಸಂಬಂಧಿಯೊಬ್ಬರು ಸುದ್ದಿಗಾರರಿಗೆ ವಿವರಿಸಿದರು.
ಘಟನೆಯ ಕುರಿತು ತನಿಖೆ ನಡೆಸಿ ವರದಿಯನ್ನು ಸಲ್ಲಿಸುವಂತೆ ರಾಜ್ಯ ಸರ್ಕಾರ ಕಂಧಮಾಲ್ ಜಿಲ್ಲಾಡಳಿತಕ್ಕೆ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.