ಗುಜರಾತ್ | ವಿಷಕಾರಿ ಹೊಗೆ ಸೇವಿಸಿ ಇಬ್ಬರು ಕಾರ್ಮಿಕರು ಮೃತ್ಯು
ಸಾಂದರ್ಭಿಕ ಚಿತ್ರ | PC: iStock Photo
ಅಹ್ಮದಾಬಾದ್ : ಗುಜರಾತ್ ನ ಅಹ್ಮದಾಬಾದ್ ನಲ್ಲಿರುವ ಜವಳಿ ಕಾರ್ಖಾನೆಯಲ್ಲಿ ವಿಷಾಕಾರಿ ಹೊಗೆ ಸೇವಿಸಿ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ ಹಾಗೂ 7 ಮಂದಿ ಕಾರ್ಮಿಕರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನಗರದ ನರೋಲ್ ಕೈಗಾರಿಕಾ ಪ್ರದೇಶದಲ್ಲಿರುವ ದೇವಿ ಸಿಂಥೆಟಿಕ್ಸ್ ನಲ್ಲಿ ಈ ಘಟನೆ ಸಂಭವಿಸಿದೆ. ‘‘ಸ್ಪೆಂಟ್ ಆ್ಯಸಿಡ್ ಅನ್ನು ಕಾರ್ಖಾನೆಯ ಟ್ಯಾಂಕ್ ಗೆ ವರ್ಗಾವಣೆ ಮಾಡುತ್ತಿರುವಾಗ ಹೊರ ಹೊಮ್ಮಿದ ವಿಷಕಾರಿ ಹೊಗೆಯನ್ನು 9 ಮಂದಿ ಕಾರ್ಮಿಕರು ಸೇವಿಸಿದ್ದಾರೆ ಎಂದು ಡಿಸಿಪಿ ರವಿ ಮೋಹನ್ ಸೈನಿ ತಿಳಿಸಿದ್ದಾರೆ.
‘‘ನರೇಲ್ ನ ಕಾರ್ಖಾನೆಯಲ್ಲಿ ವಿಷಕಾರಿ ಹೊಗೆ ಸೋರಿಕೆಯಾಗಿ 9 ಕಾರ್ಮಿಕರು ಅಸ್ವಸ್ಥರಾಗಿದ್ದಾರೆ ಎಂದು ಪೊಲೀಸರು ಬೆಳಗ್ಗೆ ಸುಮಾರು 10.30ಕ್ಕೆ ಮಾಹಿತಿ ಸ್ವೀಕರಿಸಿದ್ದರು. ಅನಂತರ ಅಸ್ವಸ್ಥಗೊಂಡ ಕಾರ್ಮಿಕರನ್ನು ಎಲ್ ಜಿ ಆಸ್ಪತ್ರೆಗೆ ದಾಖಲಿಸಲಾಯಿತು. ಅವರಲ್ಲಿ ಇಬ್ಬರು ಸಾವನ್ನಪ್ಪಿದರು’’ ಎಂದು ಸೈನಿ ತಿಳಿಸಿದ್ದಾರೆ.
ಕಾರ್ಖಾನೆಗಳಲ್ಲಿ ಪ್ರಿಂಟಿಂಗ್ ಹಾಗೂ ಡೈಯಿಂಗ್ ಗೆ ಬಳಸುವ ಸ್ಪೆಂಟ್ ಆ್ಯಸಿಡ್ ಅನ್ನು ಟ್ಯಾಂಕ್ ಗೆ ವರ್ಗಾಯಿಸುವ ಸಂದರ್ಭ ಅದರಿಂದ ಹೊರ ಹೊಮ್ಮಿದ ವಿಷಕಾರಿ ಹೊಗೆಯಿಂದ ಹತ್ತಿರ ನಿಂತಿದ್ದ ಕಾರ್ಮಿಕರು ಅಸ್ವಸ್ಥರಾದರು ಎಂದು ಪ್ರಾಥಮಿಕ ತನಿಖೆ ಬಹಿರಂಗಗೊಳಿಸಿದೆ.