ಮಧ್ಯಪ್ರದೇಶ | ಎರಡು ವರ್ಷದ ಮಗುವನ್ನು ಕಚ್ಚಿ ಕೊಂದ ಬೀದಿ ನಾಯಿಗಳು
ಸಾಂದರ್ಭಿಕ ಚಿತ್ರ
ಖರ್ಗೋನ್ (ಮಧ್ಯಪ್ರದೇಶ): ಕಟ್ಟಡ ನಿರ್ಮಾಣ ಜಾಗವೊಂದರ ಬಳಿ ಆಟವಾಡುತ್ತಿದ್ದ ಎರಡು ವರ್ಷದ ಮಗುವನ್ನು ಬೀದಿ ನಾಯಿಗಳು ಕಚ್ಚಿ ಕೊಂದಿರುವ ಘಟನೆ ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಈ ಘಟನೆಯು ಸೋಮವಾರ ರಾತ್ರಿ ಮಂಗ್ರೂಲ್ ರಸ್ತೆಯಲ್ಲಿ ನಡೆದಿದೆ ಎಂದು ಕೊತ್ವಾಲಿ ಪೊಲೀಸ್ ಠಾಣೆಯ ಠಾಣಾಧಿಕಾರಿ ಬಿ.ಎಲ್.ಮಂಡ್ಲೊಯಿ ತಿಳಿಸಿದ್ದಾರೆ.
ಖರ್ಗೋನ್ ಜಿಲ್ಲೆಯ ಉಪ್ಡಿ ಗ್ರಾಮದ ನಿವಾಸಿಯಾದ ಬಾಲಕಿಯ ತಂದೆಯು ನಿರ್ಮಾಣ ಕಾಮಗಾರಿ ಜಾಗದಲ್ಲಿ ತನ್ನ ಕುಟುಂಬದ ಸದಸ್ಯರೊಂದಿಗೆ ಭದ್ರತಾ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಅವರು ಮಾಹಿತಿ ನೀಡಿದ್ದಾರೆ.
ರಸ್ತೆಯಲ್ಲಿ ಆಟವಾಡುತ್ತಿದ್ದ ಬಾಲಕಿಯ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದ ಸಂದರ್ಭದಲ್ಲಿ ಬಾಲಕಿಯ ತಂದೆ ಅಡುಗೆ ಮಾಡುತ್ತಿದ್ದರೆ, ತಾಯಿಯು ಸ್ನಾನ ಮಾಡುತ್ತಿದ್ದಳು ಎಂದು ಅವರು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಬಾಲಕಿಯ ಮೇಲೆ ದಾಳಿ ನಡೆಸಿರುವ ಬೀದಿ ನಾಯಿಗಳು, ಆಕೆಯನ್ನು 100-150 ಮೀ ದೂರ ಎಳೆದೊಯ್ದದ್ದರಿಂದ ಆಕೆ ಗಂಭೀರವಾಗಿ ಗಾಯಗೊಂಡಿದ್ದಳು ಎಂದು ಹೇಳಲಾಗಿದೆ.
ಕೂಡಲೇ ಬಾಲಕಿಯ ಪೋಷಕರು, ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದರಾದರೂ, ಬಾಲಕಿಯು ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.
ಇಂದು ಬಾಲಕಿಯ ಮರಣೋತ್ತರ ಪರೀಕ್ಷೆ ನಡೆಯಲಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು
ತಿಳಿಸಿದ್ದಾರೆ.