ಜಾರ್ಖಂಡ್ | ಮೇಕೆ ಕಳ್ಳತನದ ಶಂಕೆಯಲ್ಲಿ ಇಬ್ಬರು ಯುವಕರನ್ನು ಥಳಿಸಿ ಹತ್ಯೆಗೈದ ಗುಂಪು

ಭೋಲಾನಾಥ್ ಮಹತೋ / ಕಿನ್ಶುಕ್ ಬೆಹೆರಾ (Photo credit: telegraphindia.com)
ರಾಂಚಿ: ಜಾರ್ಖಂಡ್ನ ಪೂರ್ವ ಸಿಂಗ್ಭೂಮ್ ಜಿಲ್ಲೆಯಲ್ಲಿ ಮೇಕೆ ಕಳ್ಳತನದ ಆರೋಪದಲ್ಲಿ ಇಬ್ಬರು ಯುವಕರನ್ನು ಗುಂಪೊಂದು ಥಳಿಸಿ ಹತ್ಯೆಗೈದಿರುವ ಘಟನೆ ನಡೆದಿದೆ.
ಕುಚಿಯಾಸೋಲಿ ಗ್ರಾಮದ ಕಿನ್ಶುಕ್ ಬೆಹೆರಾ(35) ಮತ್ತು ಭೋಲಾನಾಥ್ ಮಹತೋ(26) ಹತ್ಯೆಯಾದವರು. ಚಾಕುಲಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಸೋನಾಹತು ಪಂಚಾಯತ್ನ ಜೋಡಿಸಾ ಗ್ರಾಮದಲ್ಲಿ ಶನಿವಾರ ಮುಂಜಾನೆ ಈ ಘಟನೆ ನಡೆದಿದೆ.
ಪೊಲೀಸ್ ಮೂಲಗಳ ಪ್ರಕಾರ, ಜೋಡಿಸಾ ಗ್ರಾಮದಲ್ಲಿ ಈ ಮೊದಲು ಹಲವು ಮೇಕೆಗಳ ಕಳ್ಳತನ ನಡೆದಿದೆ. ಶನಿವಾರ ಮುಂಜಾನೆ ಹರಗೋವಿಂದ್ ನಾಯಕ್ ಎಂಬಾತನ ಮನೆಯ ಬಳಿ ಕಿನ್ಶುಕ್ ಬೆಹೆರಾ ಮತ್ತು ಭೋಲಾನಾಥ್ ಮಹತೋ ಅವರು ಮೇಕೆಯೊಂದಿಗೆ ಬೈಕ್ನಲ್ಲಿ ತೆರಳುತ್ತಿದ್ದರು. ಈ ವೇಳೆ ಮೇಕೆ ಕಳ್ಳತನ ಮಾಡಿ ಕೊಂಡೊಯ್ಯುತ್ತಿದ್ದಾರೆಂದು ನಾಯಕ್ ಸ್ಥಳೀಯರನ್ನು ಕರೆದಿದ್ದಾನೆ. ಈ ವೇಳೆ ಜಮಾಯಿಸಿದ ಜನರ ಗುಂಪು ಬೈಕ್ ನಲ್ಲಿದ್ದವರನ್ನು ಬೆನ್ನಟ್ಟಿ ಹಿಡಿದು ಮರಕ್ಕೆ ಕಟ್ಟಿ ಹಾಕಿ ಥಳಿಸಿದ್ದಾರೆ. ಘಟನೆಯಲ್ಲಿ ಬೆಹೆರಾ ಸ್ಥಳದಲ್ಲೇ ಮೃತಪಟ್ಟಿದ್ದು, ಮಹಾತೋ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಜೆಮ್ಶೆಡ್ಪುರದ ಎಂಜಿಎಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಈಸ್ಟ್ ಸಿಂಗ್ಭೂಮ್ ಪೊಲೀಸ್ ಅಧೀಕ್ಷಕ(ಗ್ರಾಮೀಣ) ರಿಷಬ್ ಗಾರ್ಗ್ ಈ ಕುರಿತು ಪ್ರತಿಕ್ರಿಯಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಗ್ರಾಮಸ್ಥರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.