ಯುಎಪಿಎ ಪ್ರಕರಣ : ಜಾಮೀನು ಕೋರಿ ದಿಲ್ಲಿ ಹೈಕೋರ್ಟ್ ಮೆಟ್ಟಿಲೇರಿದ ‘ನ್ಯೂಸ್ ಕ್ಲಿಕ್’ ಎಚ್ಆರ್ ಅಮಿತ್ ಚಕ್ರವರ್ತಿ
Photo: newsclick.com
ಹೊಸದಿಲ್ಲಿ: ಚೀನಾ ಪರ ಪ್ರಚಾರ ಮಾಡಲು ಹಣ ಪಡೆದ ಆರೋಪದಲ್ಲಿ ಯುಎಪಿಎ ಅಡಿಯಲ್ಲಿ ‘ನ್ಯೂಸ್ ಕ್ಲಿಕ್’ ವಿರುದ್ಧ ದಾಖಲಾಗಿರುವ ಪ್ರಕರಣದಲ್ಲಿ ಜಾಮೀನು ನೀಡುವಂತೆ ಅದರ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಅಮಿತ್ ಚಕ್ರವರ್ತಿ ದಿಲ್ಲಿ ಉಚ್ಚ ನ್ಯಾಯಾಲಯವನ್ನು ಬುಧವಾರ ಕೋರಿದ್ದಾರೆ.
ಪ್ರಕರಣದಲ್ಲಿ ಕಳೆದ ತಿಂಗಳು ಮಾಫಿ ಸಾಕ್ಷಿದಾರನಾಗಿ ಪರಿವರ್ತಿತರಾಗಿರುವ ಅಮಿತ್ ಚಕ್ರವರ್ತಿಯ ಜಾಮೀನು ಅರ್ಜಿಯ ಆದೇಶವನ್ನು ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಅವರು ಕಾಯ್ದಿರಿಸಿದ್ದಾರೆ.
ಈ ಪ್ರಕರಣದಲ್ಲಿ ಅಮಿತ್ ಚಕ್ರವರ್ತಿ ಅವರು ವಿಚಾರಣಾ ನ್ಯಾಯಾಲಯದಿಂದ ಕ್ಷಮಾದಾನ ಪಡೆದಿದ್ದಾರೆ ಹಾಗೂ ತನಿಖೆಗೆ ಸಹಕರಿಸುತ್ತಿದ್ದಾರೆ ಎಂದು ಅಮಿತ್ ಚಕ್ರವರ್ತಿ ಅವರ ನ್ಯಾಯವಾದಿ ತಿಳಿಸಿದರು.
‘‘ನಾನು 2023 ಅಕ್ಟೋಬರ್ 3ರಿಂದ ಕಸ್ಟಡಿಯಲ್ಲಿ ಇದ್ದೇನೆ. ಪ್ರಕರಣ ಈಗಲೂ ತನಿಖೆಯ ಹಂತದಲ್ಲಿದೆ. ಆರೋಪ ಪಟ್ಟಿ ಸಲ್ಲಿಸಿಲ್ಲ’’ ಎಂದು ಅಮಿತ್ ಚಕ್ರವರ್ತಿ ಅವರನ್ನು ಉಲ್ಲೇಖಿಸಿ ಅವರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.
ವಿಶೇಷ ನ್ಯಾಯಾಧೀಶ ಹರ್ದೀಪ್ ಕೌರ್ ಅವರು ಮಾಫಿ ಸಾಕ್ಷಿದಾರನಾಗಲು ಅಮಿತ್ ಚಕ್ರವರ್ತಿಗೆ ಕಳೆದ ತಿಂಗಳು ಅವಕಾಶ ನೀಡಿದ್ದರು ಹಾಗೂ ಕ್ಷಮಾದಾನ ನೀಡಿದ್ದರು