ಯುಎಪಿಎ ಪ್ರಕರಣ: ಪಿಎಫ್ಐ ಮಾಜಿ ಅಧ್ಯಕ್ಷ ಇ. ಅಬೂಬಕರ್ ಅವರಿಗೆ ಜಾಮೀನು ನಿರಾಕರಿಸಿದ ಸುಪ್ರೀಂ ಕೋರ್ಟ್

ಪಿಎಫ್ಐ ನಾಯಕ ಇ ಅಬೂಬಕರ್ (Photo credit: muslimmirror.com)
ಹೊಸದಿಲ್ಲಿ : ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್ಐ) ಮಾಜಿ ಅಧ್ಯಕ್ಷ ಇ. ಅಬೂಬಕರ್ ಅವರಿಗೆ ವೈದ್ಯಕೀಯ ಆಧಾರದ ಮೇಲೆ ಜಾಮೀನು ನೀಡಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ.
2022ರಲ್ಲಿ ಪಿಎಫ್ಐ ಸಂಘಟನೆಯ ನಿಷೇಧದ ವೇಳೆ ಇ. ಅಬೂಬಕರ್ ಅವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಬಂಧಿಸಿತ್ತು. ವಿಚಾರಣಾ ನ್ಯಾಯಾಲಯವು ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ನಂತರ ಅವರು ಜಾಮೀನು ಕೋರಿ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ, ವೈದ್ಯಕೀಯ ವರದಿ ಪರಿಶೀಲನೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿಗಳಾದ ಎಂಎಂ ಸುಂದ್ರೇಶ್ ಮತ್ತು ರಾಜೇಶ್ ಬಿಂದಾಲ್ ಅವರ ಪೀಠವು ಇ.ಅಬೂಬಕರ್ ಅವರಿಗೆ ಜಾಮೀನು ನೀಡಲು ನಿರಾಕರಿಸಿತ್ತು.
ಇ.ಅಬೂಬಕರ್ ಅವರು ತಮ್ಮ ಜಾಮೀನು ಅರ್ಜಿಯಲ್ಲಿ ನನಗೆ 70 ವರ್ಷ ವಯಸ್ಸಾಗಿದ್ದು , ಪಾರ್ಕಿನ್ಸನ್ ಕಾಯಿಲೆ ಇದೆ ಮತ್ತು ಕ್ಯಾನ್ಸರ್ ಗಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಎನ್ಐಎ ತನ್ನ ವಿರುದ್ಧ ಆರೋಪ ಸಾಬೀತು ಪಡಿಸಲು ವಿಫಲವಾದ ಖಾರಣ ಜಾಮೀನು ನೀಡಬೇಕೆಂದು ಇ.ಅಬೂಬಕರ್ ಪರ ವಕೀಲರು ಕೋರ್ಟ್ ನಲ್ಲಿ ವಾದಿಸಿದ್ದರು.
ಇ.ಅಬೂಬಕರ್ ಅವರನ್ನು 2022ರ ಸೆಪ್ಟೆಂಬರ್ 22ರಂದು ಬಂಧಿಸಲಾಗಿತ್ತು. ಕೇಂದ್ರ ಸರ್ಕಾರ 2022ರ ಸೆಪ್ಟೆಂಬರ್ 28ರಂದು ಕಠಿಣ ಭಯೋತ್ಪಾದನಾ ವಿರೋಧಿ ಕಾನೂನಿನ ಅಡಿಯಲ್ಲಿ ಐದು ವರ್ಷಗಳ ಕಾಲ ಪಿಎಫ್ಐ ಮತ್ತು ಸಹವರ್ತಿ ಸಂಘಟನೆಗಳನ್ನು ನಿಷೇಧಿಸಿತ್ತು.