ಯುಎಪಿಎಯಡಿ ಜೈಲೇ ನಿಯಮ, ಜಾಮೀನು ವಿನಾಯಿತಿ ಮಾತ್ರ : ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್ | Photo: PTI
ಹೊಸದಿಲ್ಲಿ : ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ)ಯಡಿ ಜೈಲೇ ನಿಯಮ ಮತ್ತು ಜಾಮೀನು ವಿನಾಯಿತಿ ಮಾತ್ರ ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ.
ಸಿಖ್ ಪ್ರತ್ಯೇಕತಾವಾದಕ್ಕೆ ಬೆಂಬಲ ನೀಡಿರುವ ಆರೋಪದಲ್ಲಿ ಯುಎಪಿಎ ಕಾಯ್ದೆಯಡಿ ಬಂಧನಕ್ಕೊಳಗಾಗಿರುವ ಗುರ್ವಿಂದರ್ ಸಿಂಗ್ಗೆ ಜಾಮೀನು ನಿರಾಕರಿಸುತ್ತಾ, ನ್ಯಾಯಮೂರ್ತಿಗಳಾದ ಎಮ್.ಎಮ್. ಸುಂದರೇಶ್ ಮತ್ತು ಅರವಿಂದ ಕುಮಾರ್ ಅವರನ್ನೊಳಗೊಂಡ ನ್ಯಾಯಪೀಠವೊಂದು ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಸಾಮಾನ್ಯ ಅಪರಾಧ ಪ್ರಕರಣಗಳಲ್ಲಿ ಜಾಮೀನು ಸಾಮಾನ್ಯ, ಜೈಲು ವಿನಾಯಿತಿ ಎನ್ನುವುದು ಸಾಮಾನ್ಯ ತಿಳುವಳಿಕೆ. ಆದರೆ, ಈ ತತ್ವವು ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಯಡಿ ಸಲ್ಲಿಸಲಾಗುವ ಜಾಮೀನು ಅರ್ಜಿಗಳಿಗೆ ಅನ್ವಯವಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿತು.
‘‘ಜಾಮೀನು ನೀಡುವ ಅಧಿಕಾರವು ಯುಎಪಿಎ ಕಾಯ್ದೆಯಡಿ ತೀವ್ರ ನಿರ್ಬಂಧಕ್ಕೊಳಗಾಗಿದೆ’’ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು. ‘‘ಯುಎಪಿಎಯ 43ಡಿ(5) ಪರಿಚ್ಛೇದದಲ್ಲಿ ‘ಬಿಡುಗಡೆಗೊಳಿಸಬಾರದು’ ಎಂದು ಹೇಳಲಾಗಿದ್ದರೆ, ಸಿ ಆರ್ ಪಿ ಸಿ ಯ 437(1) ಪರಿಚ್ಛೇದದಲ್ಲಿ ‘ಬಿಡುಗಡೆಗೊಳಿಸಬಹುದು’ ಎಂದು ಹೇಳಲಾಗಿದೆ. ಇದು ಜಾಮೀನು ವಿಚಾರದಲ್ಲಿ ಶಾಸಕಾಂಗದ ಉದ್ದೇಶವನ್ನು ಸೂಚಿಸುತ್ತದೆ. ಅಂದರೆ ಈ ಕಠೋರ ಕಾಯ್ದೆಯಲ್ಲಿ ಜೈಲು ಸಾಮಾನ್ಯ, ಜಾಮೀನು ವಿನಾಯಿತಿ’’ ಎಂದು ಅದು ಹೇಳಿದೆ.
ಪ್ರಾಥಮಿಕ ತಪಾಸಣೆಯ ವೇಳೆ, ಆರೋಪಿಯ ವಿರುದ್ಧದ ಆರೋಪಗಳಲ್ಲಿ ಸತ್ಯವಿದೆ ಎಂದು ನಂಬಲು ಆಧಾರಗಳಿವೆ ಎಂಬುದಾಗಿ ನ್ಯಾಯಾಲಯ ಭಾವಿಸಿದರೆ, ನಿಯಮದಂತೆ ಜಾಮೀನನ್ನು ತಿರಸ್ಕರಿಸಬೇಕು ಎಂದು ಯುಎಪಿಎ ಹೇಳುತ್ತದೆ ಎಂದು ನ್ಯಾಯಪೀಠ ಹೇಳಿದೆ. ಜಾಮೀನು ತಿರಸ್ಕರಿಸಲು ಮಾಡುವ ಪರೀಕ್ಷೆಯ ವಿಫಲವಾದರೆ ಮಾತ್ರ ಜಾಮೀನು ನೀಡುವ ಬಗ್ಗೆ ಮುಂದಿನ ಕ್ರಮವನ್ನು ನ್ಯಾಯಾಲಯಗಳು ತೆಗೆದುಕೊಳ್ಳಬಹುದು. ಈ ಜಾಮೀನನ್ನೂ ‘ತ್ರಿವಳಿ ಪರೀಕ್ಷೆ’ಯ (ವಿಮಾನದ ಮೂಲಕ ಹೊರದೇಶಗಳಿಗೆ ಹೋಗುವ ಅಪಾಯ, ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಅಪಾಯ ಮತ್ತು ಸಾಕ್ಷ್ಯ ನಾಶ ಮಾಡುವ ಅಪಾಯ) ಆಧಾರದಲ್ಲಿ ನಿರ್ಧರಿಸಬೇಕಾಗುತ್ತದೆ’’ ಎಂದು ನ್ಯಾಯಾಲಯ ಹೇಳಿದೆ.