ಮುಂದಿನ ಅವಧಿಯಲ್ಲಿ ಯುಸಿಸಿ, ಏಕಕಾಲಿಕ ಚುನಾವಣೆ ಜಾರಿ: ಅಮಿತ್ ಶಾ
ಅಮಿತ್ ಶಾ | ANI
ಹೊಸದಿಲ್ಲಿ: ಬಿಜೆಪಿ ಅಧಿಕಾರಕ್ಕೆ ಮರಳಿದರೆ ಸಂಬಂಧ ಪಟ್ಟವರೊಂದಿಗೆ ವ್ಯಾಪಕ ಸಮಾಲೋಚನೆಗಳ ಬಳಿಕ ಮುಂದಿನ ಐದು ವರ್ಷಗಳಲ್ಲಿ ದೇಶಾದ್ಯಂತ ಏಕರೂಪ ನಾಗರಿಕ ಸಂಹಿತೆ (ಯುಸಿಸಿ)ಯನ್ನು ಜಾರಿಗೊಳಿಸಲಾಗುವುದು ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಹೇಳಿದ್ದಾರೆ.
ದೇಶದಲ್ಲಿ ಏಕಕಾಲಿಕ ಚುನಾವಣೆಗಳನ್ನು ನಡೆಸಬೇಕಾದ ಸಮಯವು ಬಂದಿದೆ,ಹೀಗಾಗಿ ಮೋದಿ ಸರಕಾರವು ತನ್ನ ಮುಂದಿನ ಅಧಿಕಾರಾವಧಿಯಲ್ಲಿ ‘ಒಂದು ದೇಶ,ಒಂದು ಚುನಾವಣೆ’ಯನ್ನು ಸಹ ಜಾರಿಗೊಳಿಸಲಿದೆ ಎಂದು ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ವಿಸ್ತೃತ ಸಂದರ್ಶನದಲ್ಲಿ ಶಾ ಹೇಳಿದರು. ಏಕಕಾಲದಲ್ಲಿ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳನ್ನು ನಡೆಸುವುದರಿಂದ ವೆಚ್ಚವೂ ತಗ್ಗಲಿದೆ ಎಂದು ಅವರು ಪ್ರತಿಪಾದಿಸಿದರು.
ಪ್ರಸ್ತುತ ಬಿರುಬಿಸಿಲಿನ ಸಮಯದಲ್ಲಿ ನಡೆಯುತ್ತಿರುವ ಚುನಾವಣೆಗಳನ್ನು ಚಳಿಗಾಲದಲ್ಲಿ ಅಥವಾ ಇತರ ಯಾವುದೇ ಸಮಯದಲ್ಲಿ ನಡೆಸುವ ಸಾಧ್ಯತೆಗಳ ಕುರಿತು ಪ್ರಶ್ನೆಗೆ ಶಾ,‘ನಾವು ಈ ಬಗ್ಗೆ ಯೋಚಿಸಬಹುದು. ನಾವು ಒಂದು ಚುನಾವಣೆಯನ್ನು ಹಿಂದೂಡಿದರೆ ಅದನ್ನು ಮಾಡಬಹುದು. ಅದನ್ನು ಮಾಡಲೇಬೇಕು. ಇದು ವಿದ್ಯಾರ್ಥಿಗಳಿಗೆ ರಜೆಯ ಸಮಯವೂ ಹೌದು ಮತ್ತು ಬಹಳಷ್ಟು ಸಮಸ್ಯೆಗಳನ್ನೂ ಸೃಷ್ಟಿಸುತ್ತದೆ. ಸಮಯ ಸರಿದಂತೆ ಲೋಕಸಭಾ ಚುನಾವಣೆ ಕ್ರಮೇಣ ಬೇಸಿಗೆಯನ್ನು ತಲುಪಿದೆ’ ಎಂದು ಉತ್ತರಿಸಿದರು.
ಯುಸಿಸಿ ಕುರಿತು ಮಾತನಾಡಿದ ಅವರು,‘ಏಕರೂಪ ನಾಗರಿಕ ಸಂಹಿತೆಯು ಸ್ವಾತಂತ್ರ್ಯಾನಂತರ ನಮ್ಮ ಸಂವಿಧಾನ ಶಿಲ್ಪಿಗಳು ನಮಗೆ,ನಮ್ಮ ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳಿಗೆ ಬಿಟ್ಟಿರುವ ಜವಾಬ್ದಾರಿಯಾಗಿದ್ದು,ಇದು ಈಗಲೂ ಬಾಕಿಯುಳಿದಿದೆ. ಸಂವಿಧಾನ ಸಭೆಯು ರೂಪಿಸಿದ ಮಾರ್ಗದರ್ಶಿ ತತ್ವಗಳಲ್ಲಿ ಯುಜಿಸಿಯೂ ಸೇರಿದೆ. ಆಗಲೂ ಸಹ ಕೆ.ಎಂ.ಮುನ್ಶಿ,ರಾಜೇಂದ್ರ ಬಾಬು ಮತ್ತು ಅಂಬೇಡ್ಕರ್ ಅವರಂತಹ ಕಾನೂನು ತಜ್ಞರು ಜಾತ್ಯತೀತ ದೇಶದಲ್ಲಿ ಧರ್ಮವನ್ನು ಆಧರಿಸಿದ ಕಾನೂನುಗಳು ಇರಕೂಡದು,ಏಕರೂಪ ನಾಗರಿಕ ಸಂಹಿತೆ ಬೇಕು ಎಂದು ಪ್ರತಿಪಾದಿಸಿದ್ದರು ಎಂದರು.
ಯುಜಿಸಿಯು ಕೇಂದ್ರ ಮತ್ತು ರಾಜ್ಯಗಳಿಗೆ ಸಂಬಂಧಿಸಿದ ವಿಷಯವಾಗಿದೆ,ಹೀಗಾಗಿ ಬಿಜೆಪಿಯು ತಾನು ಬಹುಮತದ ಸರಕಾರವನ್ನು ಹೊಂದಿರುವ ಉತ್ತರಾಖಂಡದಲ್ಲಿ ಅದನ್ನು ಪ್ರಾಯೋಗಿವಾಗಿ ಜಾರಿಗೆ ತಂದಿದೆ ಎಂದು ಶಾ ಹೇಳಿದರು.
ಯುಸಿಸಿಯು 1950ರ ದಶಕದಿಂದಲೂ ಬಿಜೆಪಿಯ ಅಜೆಂಡಾದಲ್ಲಿದೆ ಮತ್ತು ಇತ್ತೀಚಿಗೆ ಬಿಜೆಪಿ ಆಡಳಿತದ ಉತ್ತರಾಖಂಡದಲ್ಲಿ ಅದನ್ನು ಜಾರಿಗೊಳಿಸಲಾಗಿದೆ.
‘ಯುಜಿಸಿಯು ಒಂದು ಬಹುದೊಡ್ಡ ಸಾಮಾಜಿಕ,ಕಾನೂನಾತ್ಮಕ ಮತ್ತು ಧಾರ್ಮಿಕ ಸುಧಾರಣೆಯಾಗಿದೆ ಎಂದು ನಾನು ಭಾವಿಸಿದ್ದೇನೆ. ಉತ್ತರಾಖಂಡ ಸರಕಾರವು ಮಾಡಿರುವ ಕಾಯ್ದೆಯು ಸಾಮಾಜಿಕ ಮತ್ತು ಕಾನೂನಾತ್ಮಕ ಪರಿಶೀಲನೆಗೆ ಒಳಪಡಿಸಬೇಕಿದೆ. ಧಾರ್ಮಿಕ ನಾಯಕರ ಜೊತೆಯೂ ಸಮಾಲೋಚನೆಗಳು ನಡೆಯಬೇಕು. ನನ್ನ ಮಾತಿನ ಅರ್ಥವೆಂದರೆ ಈ ಬಗ್ಗೆ ವಿಸ್ತೃತ ಚರ್ಚೆ ನಡೆಯಬೇಕು. ಯುಜಿಸಿ ವಿರುದ್ಧ ಯಾರಾದರೂ ಖಂಡಿತವಾಗಿ ನ್ಯಾಯಾಲಯಕ್ಕೆ ಹೋಗುತ್ತಾರೆ ಮತ್ತು ನ್ಯಾಯಾಂಗವೂ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತದೆ. ಆದ್ದರಿಂದ ವ್ಯಾಪಕ ಚರ್ಚೆಗಳ ಬಳಿಕ ಉತ್ತರಾಖಂಡ ಸರಕಾರವು ತಂದಿರುವ ಮಾದರಿ ಕಾನೂನಿನಲ್ಲಿ ಏನಾದರೂ ಬದಲಾವಣೆಗಳು ಅಗತ್ಯವಾದರೆ ಸರಕಾರವು ತಿದ್ದುಪಡಿ ಮಾಡಬಹುದು’ ಎಂದು ಶಾ ಹೇಳಿದರು.