ಗಂಗಾ ನದಿಯಲ್ಲಿ ಮುಳುಗುವುದರಿಂದ ಮಹಾರಾಷ್ಟ್ರಕ್ಕೆ ಎಸಗಿರುವ ದ್ರೋಹವನ್ನು ತೊಳೆದುಕೊಳ್ಳಲು ಸಾಧ್ಯವಿಲ್ಲ: ಏಕನಾಥ್ ಶಿಂಧೆ ವಿರುದ್ಧ ಉದ್ಧವ್ ಠಾಕ್ರೆ ವಾಗ್ದಾಳಿ

ಏಕನಾಥ್ ಶಿಂಧೆ , ಉದ್ಧವ್ ಠಾಕ್ರೆ | PTI
ಮುಂಬೈ: “ಗಂಗಾನದಿಯಲ್ಲಿ ಮುಳುಗುವುದರಿಂದ ಪಾಪಗಳು ತೊಳೆದು ಹೋಗುವುದಿಲ್ಲ. ಮಹಾರಾಷ್ಟ್ರಕ್ಕೆ ಎಸಗಿರುವ ದ್ರೋಹದ ಕಲೆ ಹಾಗೇ ಉಳಿಯಲಿದೆ” ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಏಕನಾಥ್ ಶಿಂಧೆಯ ಇತ್ತೀಚಿನ ಧಾರ್ಮಿಕ ಚಟುವಟಿಕೆಗಳನ್ನು ಉಲ್ಲೇಖಿಸಿ ಶಿವಸೇನೆ (ಉದ್ಧವ್ ಬಣ) ಮುಖ್ಯಸ್ಥ ಉದ್ಧವ್ ಠಾಕ್ರೆ ತೀವ್ರ ವಾಗ್ದಾಳಿ ನಡೆಸಿದರು.
ಗುರುವಾರ ಬಿರ್ಲಾ ಮಾತೋಶ್ರೀ ಆಡಿಟೋರಿಯಂನಲ್ಲಿ ಆಯೋಜಿಸಲಾಗಿದ್ದ ಮರಾಠಿ ಭಾಷಾ ದಿನಾಚರಣೆಯನ್ನುದ್ದೇಶಿಸಿ ಮಾತನಾಡಿದ ಉದ್ಧವ್ ಠಾಕ್ರೆ, ಹಿಂದುತ್ವವನ್ನು ಕೈಬಿಟ್ಟಿದ್ದಾರೆ ಎಂದು ತಮ್ಮ ವಿರುದ್ಧ ಕೇಳಿ ಬರುತ್ತಿರುವ ಆರೋಪಗಳಿಗೆ ಉತ್ತರವೆಂಬಂತೆ, “ನಾವು ಹಿಂದೂಗಳು ಎಂದು ಗರ್ವದಿಂದ ಹೇಳಿ” ಎಂಬ ವಾಕ್ಯದೊಂದಿಗೆ ತಮ್ಮ ಭಾಷಣ ಪ್ರಾರಂಭಿಸಿದರು. ಶಿವಸೇನೆಯನ್ನು ಮರಾಠಿ ಜನರಿಗಾಗಿ ಸ್ಥಾಪಿಸಲಾಯಿತು. ಇನ್ನಿತರರಿಗೆ ಅಗೌರವ ತೋರುವ ಮೂಲಕ ಮರಾಠಿ ಭಾಷೆಯ ಅಸ್ಮಿತೆಯನ್ನು ಬೆಳೆಸಬಾರದು ಎಂದು ಅವರು ಕರೆ ನೀಡಿದರು.
ತಮ್ಮ ಭಾಷಣದ ವೇಳೆ ಮಹಾರಾಷ್ಟ್ರಕ್ಕೆ ಮುಸ್ಲಿಮರು ನೀಡಿದ ಕೊಡುಗೆಯ ಕುರಿತು ವಿಶೇಷವಾಗಿ ಉಲ್ಲೇಖಿಸಿದ ಅವರು, ಮಹಾರಾಷ್ಟ್ರದ ಏಕೀಕರಣ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ ಹಾಗೂ ತಮ್ಮ ನಿವಾಸಕ್ಕೆ ನಿಯಮಿತವಾಗಿ ಭೇಟಿ ನೀಡುತ್ತಿದ್ದ ಕವಿ ಶಾಹಿರ್ ಅಮರ್ ಶೇಖ್ ರನ್ನು ಸ್ಮರಿಸಿದರು. ಮರಾಠಿ ಸಾಹಿತ್ಯ ಸಮ್ಮೇಳನದಲ್ಲಿ ಮಹಾರಾಷ್ಟ್ರದ ನಾಡಗೀತೆ ‘ಗರ್ಜಾ ಮಹಾರಾಷ್ಟ್ರ ಮಾಝಾ’ ಗೀತೆಯನ್ನು ಹಾಡಿದ್ದ ಕಾಶ್ಮೀರದ ಮುಸ್ಲಿಂ ಯುವತಿ ಶಮೀಮಾ ಅಖ್ತರ್ ಹೆಸರನ್ನೂ ಅವರು ಉಲ್ಲೇಖಿಸಿದರು.
“ಕಟೇಂಗೆ ತೊ ಬಟೇಂಗೆ ಘೋಷಣೆ ಕೂಗಿದ್ದವರೆದುರು ಆಕೆ ಈ ಗೀತೆಯನ್ನು ಹಾಡಿದಾಗ, ನಮ್ಮ ರಾಜಕೀಯಕ್ಕೆ ಏನಾಗಬಹುದು ಎಂದು ಪ್ರಶ್ನಿಸಿಕೊಳ್ಳಲು ಅವರು ಪ್ರಾರಂಭಿಸಿರಬಹುದು” ಎಂದು ವಿಭಜನಕಾರಿ ರಾಜಕಾರಣದಲ್ಲಿ ಮುಳುಗಿರುವವರನ್ನು ಉಲ್ಲೇಖಿಸಿ ಅವರು ವ್ಯಂಗ್ಯವಾಡಿದರು.
ಆಡಳಿತದ ಬದಲು ಧಾರ್ಮಿಕ ಸಾಂಕೇತೀಕರಣಕ್ಕೆ ಆದ್ಯತೆ ನೀಡುತ್ತಿರುವುದನ್ನು ಟೀಕಿಸಿದ ಉದ್ಧವ್ ಠಾಕ್ರೆ, “ಧಾರ್ಮಿಕ ಆಚರಣೆಗಳನ್ನು ಮಾಡುವುದರಿಂದ, ಉತ್ತಮ ನಾಗರಿಕ ಎಂದು ವ್ಯಾಖ್ಯಾನಕ್ಕೊಳಗಾಗಲು ಸಾಧ್ಯವಿಲ್ಲ” ಎಂದು ಹೇಳಿದರು. ಏಕನಾಥ್ ಶಿಂದೆಯ ಮಹಾರಾಷ್ಟ್ರಕ್ಕಾಗಿನ ನಿಷ್ಠೆಯನ್ನು ಪ್ರಶ್ನಿಸಿದ ಅವರು, "ನೀವೆಷ್ಟೇ ಬಾರಿ ಗಂಗಾ ನದಿಯಲ್ಲಿ ಮುಳುಗೆದ್ದರೂ, ಮಹಾರಾಷ್ಟ್ರಕ್ಕೆ ಎಸಗಿರುವ ದ್ರೋಹ ತೊಳೆದು ಹೋಗುವುದಿಲ್ಲ” ಎಂದು ಟೀಕಾಪ್ರಹಾರ ನಡೆಸಿದರು.