ಮುಸ್ಲಿಮರ ಬಗ್ಗೆ ಬಿಜೆಪಿ ತೋರಿಸಿರುವ ‘ಕಾಳಜಿ’ಯಿಂದ ಜಿನ್ನಾರಿಗೂ ನಾಚಿಕೆಯಾಗುತ್ತಿತ್ತು: ಉದ್ಧವ್ ಠಾಕ್ರೆ ವ್ಯಂಗ್ಯ
ವಕ್ಫ್ ಮಸೂದೆ ಕುರಿತು ಕೇಸರಿ ಪಕ್ಷದ ನಿಲುವನ್ನು ಟೀಕಿಸಿದ ಶಿವಸೇನೆ (ಯುಬಿಟಿ) ಮುಖ್ಯಸ್ಥ

ಉದ್ಧವ್ ಠಾಕ್ರೆ (Photo: PTI)
ಮುಂಬೈ: ಗುರುವಾರ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಶಿವಸೇನೆ(ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು, ಅಮೆರಿಕದಿಂದ ಪ್ರತಿಸುಂಕ ಹೇರಿಕೆಯನ್ನು ಕೇಂದ್ರವು ನಿರ್ವಹಿಸುತ್ತಿರುವ ರೀತಿಯನ್ನು ಪ್ರಶ್ನಿಸಿದರು. ವಕ್ಫ್ ಮಸೂದೆ ಕುರಿತು ಕೇಸರಿ ಪಕ್ಷದ ನಿಲುವನ್ನೂ ಅವರು ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಠಾಕ್ರೆ,ಅಮೆರಿಕದ ಸುಂಕಗಳು ಒಡ್ಡಲಿರುವ ಆರ್ಥಿಕ ಸವಾಲುಗಳು,ಅಪಾಯಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ದೇಶಕ್ಕೆ ತಿಳಿಸಬೇಕಿತ್ತು ಮತ್ತು ಅವುಗಳ ಪರಿಣಾಮಗಳನ್ನು ತಗ್ಗಿಸಲು ಕ್ರಮಗಳ ಬಗ್ಗೆ ವಿವರಿಸಬೇಕಿತ್ತು ಎಂದರು.
ವಕ್ಫ್ ಮಸೂದೆಯತ್ತ ಗಮನ ಹರಿಸಿದ ಠಾಕ್ರೆ, ಮುಸ್ಲಿಮರ ವಿಚಾರವಾಗಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳ ಇತ್ತೀಚಿನ ಹೇಳಿಕೆಗಳನ್ನು ಟೀಕಿಸಿದರು.
ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಮುಸ್ಲಿಮರ ಬಗ್ಗೆ ತೋರಿಸಿರುವ ‘ಕಾಳಜಿಯು’ ಮುಹಮ್ಮದ್ ಅಲಿ ಜಿನ್ನಾ ಅವರಿಗೂ ನಾಚಿಕೆಯನ್ನುಂಟು ಮಾಡುತ್ತಿತ್ತು ಎಂದು ವ್ಯಂಗ್ಯವಾಡಿದ ಠಾಕ್ರೆ, ಕೇಂದ್ರದಲ್ಲಿ ಬಿಜೆಪಿ ಮೂರನೇ ಅವಧಿಗೆ ಅಧಿಕಾರಕ್ಕೆ ಬಂದಿದೆ. ಅದರ ಪಾಲಿಗೆ ಎಲ್ಲವೂ ಸರಿಯಾಗಿ ನಡೆಯುತ್ತಿದೆ, ಆದರೂ ಅದು ಹಿಂದು-ಮುಸ್ಲಿಮ್ ವಿವಾದಗಳನ್ನು ಎತ್ತುವುದನ್ನು ಮುಂದುವರಿಸಿದೆ ಎಂದರು. ಕೇಸರಿ ಪಕ್ಷದ ಆದ್ಯತೆಗಳನ್ನು ಅವರು ಪ್ರಶ್ನಿಸಿದರು.
ವಕ್ಫ್ ಮಸೂದೆ ಕುರಿತು ತನ್ನ ಪಕ್ಷದ ನಿಲುವನ್ನು ಸ್ಪಷ್ಟಪಡಿಸಿದ ಅವರು, ಶಿವಸೇನೆ(ಯುಬಿಟಿ)ಯು ಸ್ವತಃ ಮಸೂದೆಯನ್ನು ವಿರೋಧಿಸಿರಲಿಲ್ಲ, ಆದರೆ ಭೂಮಿಯನ್ನು ವಶಪಡಿಸಿಕೊಳ್ಳುವ ಮತ್ತು ಅದನ್ನು ತನ್ನ ಕೈಗಾರಿಕೋದ್ಯಮಿ ಸ್ನೇಹಿತರಿಗೆ ಹಸ್ತಾಂತರಿಸುವ ಬಿಜೆಪಿಯ ಹುನ್ನಾರವನ್ನು ಅದು ವಿರೋಧಿಸುತ್ತದೆ ಎಂದು ಹೇಳಿದರು.
ಬಿಜೆಪಿಯು ನಿಜವಾಗಿಯೂ ಮುಸ್ಲಿಮರನ್ನು ಇಷ್ಟಪಡದಿದ್ದರೆ ತನ್ನ ಧ್ವಜದಿಂದ ಹಸಿರು ಬಣ್ಣವನ್ನು ಅದು ತೆಗೆದುಹಾಕಲಿ ಎಂದು ಠಾಕ್ರೆ ಸವಾಲೊಡ್ಡಿದರು.