ಬಿಜೆಪಿಯು ಆರೆಸ್ಸೆಸ್ ಅನ್ನು ನಿಷೇಧಿಸುವ ದಿನ ದೂರವಿಲ್ಲ ಎಂದ ಉದ್ಧವ್ ಠಾಕ್ರೆ
"ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದ ನಂತರ 'ಅಚ್ಚೇ ದಿನ್' ಪ್ರಾರಂಭ"
ಉದ್ಧವ್ ಠಾಕ್ರೆ | PC : PTI
ಮುಂಬೈ: ನಮ್ಮ ಬಣವನ್ನು ಪ್ರಧಾನಿ ನರೇಂದ್ರ ಮೋದಿ ನಕಲಿ ಶಿವಸೇನೆ ಎಂದು ಕರೆದಿದ್ದು, ಬಿಜೆಪಿಯು ಆರೆಸ್ಸೆಸ್ ಅನ್ನು ನಿಷೇಧಿಸುವ ದಿನ ದೂರವಿಲ್ಲ ಎಂದು ಶನಿವಾರ ಶಿವಸೇನೆ(ಉದ್ಧವ್ ಬಣ)ಯ ಮುಖ್ಯಸ್ಥ ಉದ್ಧವ್ ಠಾಕ್ರೆ ವ್ಯಂಗ್ಯವಾಡಿದರು. ಜೂನ್ 4ರಂದು ಕೇಂದ್ರದಲ್ಲಿ ಇಂಡಿಯಾ ಮೈತ್ರಿಕೂಟವು ಅಧಿಕಾರಕ್ಕೆ ಬಂದ ನಂತರ 'ಅಚ್ಛೆ ದಿನ್' ಪ್ರಾರಂಭವಾಗಲಿದೆ ಎಂದೂ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಮುಂಬೈನಲ್ಲಿ ಆಯೋಜಿಸಲಾಗಿದ್ದ ಇಂಡಿಯಾ ಮೈತ್ರಿಕೂಟದ ಪತ್ರಿಕಾ ಗೋಷ್ಠಿಯಲ್ಲಿ ಉದ್ಧವ್ ಠಾಕ್ರೆ ಈ ಹೇಳಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎನ್ಸಿಪಿ (ಎಸ್ಪಿ) ವರಿಷ್ಠ ಶರದ್ ಪವಾರ್ ಸೇರಿದಂತೆ ಹಲವು ಹಿರಿಯ ನಾಯಕರು ಉಪಸ್ಥಿತರಿದ್ದರು.
"ನಮ್ಮ ಬಣವನ್ನು ಪ್ರಧಾನಿ ಮೋದಿ ನಕಲಿ ಶಿವಸೇನೆ ಎಂದು ಕರೆದಿದ್ದಾರೆ. ನಾಳೆ ಅವರು ಆರೆಸ್ಸೆಸ್ ಅನ್ನು ನಕಲಿ ಎಂದು ಕರೆಯಬಹುದು. ಮೊದಲು ಅವರು ಜನರ ಹೆಸರಿಗೆ ಮಸಿ ಬಳಿಯುತ್ತಾರೆ ಹಾಗೂ ನಂತರ ತಮ್ಮ ಪಕ್ಷಕ್ಕೆ ಕರೆದುಕೊಳ್ಳುತ್ತಾರೆ. ಅವರು ಮಹಾರಾಷ್ಟ್ರ ಹಾಗೂ ಮುಂಬೈ ಅನ್ನು ಲೂಟಿ ಮಾಡಲು ಬಯಸುತ್ತಿದ್ದಾರೆ. ನಾವದನ್ನು ನಿಲ್ಲಿಸುತ್ತೇವೆ ಹಾಗೂ ಸುವರ್ಣ ಯುಗವನ್ನು ಮರಳಿ ತರುತ್ತೇವೆ" ಎಂದು ಉದ್ಧವ್ ಠಾಕ್ರೆ ಭರವಸೆ ನೀಡಿದರು.
ತನಗೆ ಕೆಲವೇ ಮತಗಳು ದೊರೆಯಲಿವೆ ಎಂಬ ಕೆಲವು ಪ್ರದೇಶಗಳಲ್ಲಿ ಬಿಜೆಪಿ ಈಗಾಗಲೇ ಜನರ ಬೆರಳುಗಳಿಗೆ ಶಾಹಿ ಹಚ್ಚುತ್ತಿದೆ. ಇದರ ಪರಿಣಾಮವಾಗಿ ತಮ್ಮ ಬೆರಳುಗಳಿಗೆ ಶಾಹಿ ಹಚ್ಚಿಸಿಕೊಂಡ ಮತದಾರರು ಮತದಾನ ಮಾಡಲು ಸಾಧ್ಯವಾಗುವುದಿಲ್ಲ. ಈ ಕುರಿತು ನಾವು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದೇವೆ" ಎಂದೂ ಅವರು ಹೇಳಿದರು.
ನಂತರ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನಿ ನರೇಂದ್ರ ಮೋದಿ ಹಿಂದಿದ್ದ ಯಾವ ಪ್ರಧಾನಿಗಳೂ ಅವರಂತೆ ಜನರನ್ನು ಪ್ರಚೋದಿಸುವ ಕೆಲಸ ಮಾಡಿರಲಿಲ್ಲ. ಅವರು ಪದೇ ಪದೇ ಪ್ರಜಾಪ್ರಭುತ್ವದ ಕುರಿತು ಮಾತನಾಡುತ್ತಾರೆ. ಆದರೆ, ಪ್ರಜಾಪ್ರಭುತ್ವದ ಸ್ಫೂರ್ತಿಗೆ ಬದ್ಧರಾಗಿರುವುದಿಲ್ಲ" ಎಂದು ವಾಗ್ದಾಳಿ ನಡೆಸಿದರು.