ಧೈರ್ಯವಿದ್ದರೆ ನಮ್ಮ ಸಂಸದರನ್ನು ಸೆಳೆಯಿರಿ: ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಏಕನಾಥ್ ಶಿಂದೆಗೆ ಉದ್ಧವ್ ಠಾಕ್ರೆ ಸವಾಲು

ಉದ್ಧವ್ ಠಾಕ್ರೆ (PTI)
ಮುಂಬೈ: ವಿರೋಧ ಪಕ್ಷವಾದ ಶಿವಸೇನೆ (ಉದ್ಧವ್ ಬಣ) ತಾವು ತೊರೆಯಲಿದ್ದೇವೆ ಎಂಬ ವರದಿಗಳನ್ನು ಪಕ್ಷದ ಎಂಟು ಸಂಸದರು ಅಲ್ಲಗಳೆದಿದ್ದು, ಇದರ ಬೆನ್ನಿಗೇ, ನಿಮಗೆ ಧೈರ್ಯವಿದ್ದರೆ ನಮ್ಮ ಸಂಸದರನ್ನು ಸೆಳೆಯಿರಿ ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಏಕನಾಥ್ ಶಿಂದೆಗೆ ಶಿವಸೇನೆ (ಉದ್ಧವ್ ಬಣ) ಮುಖ್ಯಸ್ಥ ಉದ್ಧವ್ ಠಾಕ್ರೆ ಸವಾಲು ಹಾಕಿದ್ದಾರೆ.
ಶಿವಸೇನೆ(ಉದ್ಧವ್ ಬಣ)ಯ ಸಂಸದರು ಶಿಂದೆ ನೇತೃತ್ವದ ಶಿವಸೇನೆಯನ್ನು ಸೇರ್ಪಡೆಯಾಗಬಹುದು ಎಂಬ ಊಹಾಪೋಹಗಳು ಹರಡಿರುವ ಹಿನ್ನೆಲೆಯಲ್ಲಿ ಶುಕ್ರವಾರ ಉದ್ಧವ್ ಠಾಕ್ರೆ ಮೇಲಿನಂತೆ ಸವಾಲು ಹಾಕಿದ್ದಾರೆ.
ವಿರೋಧ ಪಕ್ಷವಾದ ಶಿವಸೇನೆ(ಉದ್ಧವ್ ಬಣ)ಯ ಹಲವಾರು ನಾಯಕರು ನಮ್ಮ ಪಕ್ಷದ ಸಂಪರ್ಕದಲ್ಲಿದ್ದು, ಅವರನ್ನೆಲ್ಲ ಹಂತಹಂತವಾಗಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುವುದು ಎಂದು ಶುಕ್ರವಾರ ಮಹಾರಾಷ್ಟ್ರ ಸಚಿವ ಉದಯ್ ಸಮಂತ್ ಹೇಳಿಕೆ ನೀಡಿದ್ದರು.
“ಶಿವಸೇನೆ(ಉದ್ಧವ್ ಬಣ)ಗಿಂತ ಶಿಂದೆ ನಾಯಕತ್ವವೇ ಉತ್ತಮ ಎಂದು ಜನರಿಗೆ ಅರ್ಥವಾಗಿದೆ. ಅವರ ನಾಯಕತ್ವ ಉತ್ತಮ ಹಾಗೂ ಸಂವೇದನಾಶೀಲವಾಗಿದ್ದು, ಹೀಗಾಗಿಯೇ ಹಲವಾರು ಜನರು ನಮ್ಮ ಸಂಪರ್ಕದಲ್ಲಿದ್ದಾರೆ. ಹಲವಾರು ಜನರು ಪಕ್ಷದ ಸಂಪರ್ಕದಲ್ಲಿದ್ದು, ಅವರೆಲ್ಲ ಹಂತಹಂತವಾಗಿ ಪಕ್ಷ ಪ್ರವೇಶಿಸುವುದು ನಿಶ್ಚಿತವಾಗಿದೆ” ಎಂದು ಸಮಂತ್ ಹೇಳಿದ್ದರು.
“ಯಾವುದಾದರೂ ಕಾರ್ಯಾಚರಣೆಯನ್ನು ನಡೆಸಬೇಕಾದಾಗ, ಅದನ್ನು ಬಹಿರಂಗವಾಗಿ ಮಾಡಲಾಗುವುದಿಲ್ಲ. ಆದರೆ, ಶಿಂದೆ ಮಾಡಿರುವ ಕೆಲಸವನ್ನು ಪರಿಗಣಿಸಿ, ಇಲ್ಲಿ ಯಾವುದೇ ಕಾರ್ಯಾಚರಣೆಯನ್ನು ನಡೆಸಬೇಕಾದ ಅಗತ್ಯವಿಲ್ಲ” ಎಂದೂ ಅವರು ಹೇಳಿದ್ದರು.
ಈ ನಡುವೆ, ಉಪ ಮುಖ್ಯಮಂತ್ರಿ ಏಕನಾಥ್ ಶಿಂದೆ ಸಮ್ಮುಖದಲ್ಲಿ ಛತ್ರಪತಿ ಸಂಭಾಜಿನಗರ ಹಾಗೂ ಅಕೋಲಾದ ಹಲವಾರು ಶಿವ ಸೇನೆ (ಉದ್ಧವ್ ಬಣ) ಪದಾಧಿಕಾರಿಗಳು ಹಾಗೂ ಮಾಜಿ ಮಹಾನಗರ ಪಾಲಿಕೆ ಸದಸ್ಯರು ಶಿವಸೇನೆ (ಶಿಂದೆ ಬಣ) ಸೇರ್ಪಡೆಯಾದರು.
ಈ ಬೆಳವಣಿಗೆಗೆ ತಿರುಗೇಟು ನೀಡಿರುವ ಶಿವಸೇನೆ (ಉದ್ಧವ್ ಬಣ) ಮುಖ್ಯಸ್ಥ ಉದ್ಧವ್ ಠಾಕ್ರೆ, “ನೀವು ಶಿವಸೇನೆ (ಉದ್ಧವ್ ಬಣ) ಸಂಸದರನ್ನು ಸೆಳೆಯಲು ಪ್ರಯತ್ನಿಸಿ ಎಂದು ನಾನು ಸವಾಲು ಹಾಕುತ್ತೇನೆ. ಪೊಲೀಸ್, ಸರಕಾರಿ ಯಂತ್ರಾಂಗ ಹಾಗೂ ಕೇಂದ್ರ ತನಿಖಾ ಸಂಸ್ಥೆಗಳನ್ನು ಬಳಸದೆ ಒಬ್ಬನೇ ಒಬ್ಬ ಶಿವಸೇನೆ ಕಾರ್ಯಕರ್ತನನ್ನು ನಿಮ್ಮತ್ತ ಸೆಳೆಯಿರಿ ಎಂದು ನಾನು ಪಂಥಾಹ್ವಾನ ನೀಡುತ್ತೇನೆ” ಎಂದು ಸವಾಲು ಹಾಕಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಶಿವಸೇನೆ (ಉದ್ಧವ್ ಬಣ) ಸಂಸದರಾದ ಅರವಿಂದ್ ಸಾವಂತ್, ಅನಿಲ್ ದೇಸಾಯಿ, ಓಮ್ರಾಜೆ ನಿಂಬಾಳ್ಕರ್, ಭೌಸಾಹೇಬ್ ವಾಕ್ಚೌರೆ, ರಾಜಾಭಾವು ವಜೆ, ಸಂಜಯ್ ಜಾಧವ್, ನಾಗೇಶ್ ಅಶ್ತಿಕರ್ ಹಾಗೂ ಸಂಜಯ್ ದೇಶ್ ಮುಖ್, ನಾವೆಲ್ಲ ದೃಢವಾಗಿ ಠಾಕ್ರೆ ನೇತೃತ್ವದ ಶಿವಸೇನೆಯಲ್ಲಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಶಿವಸೇನೆ (ಉದ್ಧವ್ ಬಣ) ಸಂಸತ್ತಿನಲ್ಲಿ ಒಂಬತ್ತು ಲೋಕಸಭಾ ಸದಸ್ಯರು ಹಾಗೂ ಇಬ್ಬರು ರಾಜ್ಯಸಭಾ ಸದಸ್ಯರನ್ನು ಹೊಂದಿದೆ.