ಮೋದಿ ಭಾಷಣ ಪ್ರಸಾರ ಮಾಡುವಂತೆ, ʼವಿಕಸಿತ್ ಭಾರತ್ʼ ಪೋಸ್ಟರ್ ಹಾಕುವಂತೆ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ, ಯುಜಿಸಿ ಸೂಚನೆ
ನರೇಂದ್ರ ಮೋದಿ | Photo: PTI
ಹೊಸದಿಲ್ಲಿ: ಗುಜರಾತ್ ಮತ್ತು ಅಸ್ಸಾಂನಲ್ಲಿ ಪ್ರಧಾನಿ ನರೇಂದ್ರ ಮೋದಿ ಸೆಮಿಕಂಡಕ್ಟರ್ ಫ್ಯಾಕ್ಟರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾಡಲಿರುವ ಭಾಷಣವನ್ನು ಪ್ರಸಾರ ಮಾಡುವಂತೆ ಕೇಂದ್ರ ಸರ್ಕಾರ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸೂಚನೆ ನೀಡಿದೆ ಎಂದು thewire.in ವರದಿ ಮಾಡಿದೆ.
ಮುಂದಿನ ಲೋಕಸಭಾ ಚುನಾವಣೆಗೆ ಮಾದರಿ ನೀತಿ ಸಂಹಿತೆ ಜಾರಿಗೆ ಬರುವ ಮುನ್ನ ಮೊದಲ ಬಾರಿಯ ಮತದಾರರನ್ನು ತಲುಪಲು ಇದೊಂದು ಯತ್ನವೆಂದೇ ತಿಳಿಯಲಾಗಿದೆ.
ಗುಜರಾತ್ನ ಧೊಲೆರಾ ಮತ್ತು ಸನಂದ್ ಹಾಗೂ ಅಸ್ಸಾಂನ ಮೋರಿಗಾಂವ್ ಎಂಬಲ್ಲಿ ಈ ಸೆಮಿಕಂಡಕ್ಟರ್ ಫ್ಯಾಕ್ಟರಿಗಳ ಸ್ಥಾಪನೆಯಾಗಲಿದೆ.
ಕೇಂದ್ರ ಸರ್ಕಾರದ ನಿರ್ದೇಶವನವನ್ನು “ಪ್ರಚಾರ ಕಾರ್ಯಕ್ರಮ” ಎಂದು ಬಣ್ಣಿಸಿರುವ ಕೆಲ ಶಿಕ್ಷಣ ತಜ್ಞರು, ಕೇಂದ್ರ ಸರ್ಕಾರವು ಉನ್ನತ ಶಿಕ್ಷಣ ಸಂಸ್ಥೆಗಳ ಸ್ವಾಯತ್ತತೆಯಲ್ಲಿ ಹಸ್ತಕ್ಷೇಪ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ.
ಕಾರ್ಯಕ್ರಮ ಸ್ಥಳಗಳಲ್ಲಿ ಪ್ರಧಾನಿ ಮೋದಿ ಅವರ ಚಿತ್ರವಿರುವ ವಿಕಸಿತ್ ಭಾರತ್ ಪೋಸ್ಟರ್ಗಳನ್ನು ಹಾಕುವಂತೆ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸೂಚಿಸಲಾಗಿದ್ದು ಈ ಆದೇಶದ ಪಾಲನೆ ಸಂಬಂಧಿ ವರದಿಗಳನ್ನೂ ತನ್ನ ನಿಯಂತ್ರಣದ ಶಿಕ್ಷಣ ಸಂಸ್ಥೆಗಳು ಸಲ್ಲಿಸಬೇಕೆಂಬುದು ಇಲಾಖೆಯ ಇಂಗಿತವಾಗಿದೆ ಎಂದು ವರದಿಯೊಂದು ತಿಳಿಸಿದೆ.
ಶಿಕ್ಷಣ ಸಚಿವಾಲಯ ಹಾಗೂ ಯಜಿಸಿ ಈ ಕುರಿತಂತೆ ಪ್ರಮಾಣಿತ ಪ್ರಕ್ರಿಯೆಯನ್ನು ನೀಡಿದ್ದು ರಾಜ್ಯ ಮಟ್ಟದ ವಿವಿಗಳು ಮತ್ತು ಖಾಸಗಿ ವಿವಿಗಳು ಸೇರಿದಂತೆ ಎಲ್ಲಾ ವಿವಿಗಳು ಈ ಕಾರ್ಯಕ್ರಮ ನಡೆಸಬೇಕೆಂದು ಸೂಚಿಸಿದೆ.
ವಿವಿಗಳ ಉಪಕುಲಪತಿಗಳಿಗೆ ಕಳುಹಿಸಲಾಗಿರುವ ಪತ್ರದೊಂದಿಗೆ ಪೋಸ್ಟರ್ಗಳ ಐದು ವಿನ್ಯಾಸಗಳನ್ನೂ ಕಳುಹಿಸಲಾಗಿದೆ. ಈ ಪೋಸ್ಟರ್ಗಳಲ್ಲಿ”ಇಂಡಿಯಾಸ್ ಟೆಕೇಡ್: ಚಿಪ್ಸ್ ಫಾರ್ ವಿಕಸಿತ್ ಭಾರತ್” ಎಂದು ಬರೆಯಲಾಗಿದೆ ಮತ್ತು ಮೋದಿ ಸೆಮಿಕಂಡಕ್ಟರ್ ಘಟಕಗಳಿಗೆ ಶಂಕುಸ್ಥಾಪನೆ ನೆರವೇರಿಸುವ ಚಿತ್ರಗಳಿವೆ.
“ಇದೊಂದು ರಾಜಕೀಯ ಪ್ರೇರಿತ ಕ್ರಮ, ಇಂತಹ ಕಾರ್ಯಕ್ರಮ ನಡೆಸಲು ಸರ್ಕಾರ ಶಿಕ್ಷಣ ಸಂಸ್ಥೆಗಳನ್ನು ಒತ್ತಾಯಿಸುವುದು ತಪ್ಪು,” ಎಂದು ಶಿಕ್ಷಣ ತಜ್ಞರೊಬ್ಬರು ಹೇಳಿದ್ದಾರೆ.
ಕೆಲ ತಿಂಗಳ ಹಿಂದೆ ಎಲ್ಲಾ ವಿವಿಗಳು ಮತ್ತು ಕಾಲೇಜುಗಳಲ್ಲಿ ಮೋದಿ ಸರ್ಕಾರದ ಬೇಟಿ ಬಚಾವೋ, ಬೇಟಿ ಪಡಾವೋ ಲೋಗೋ ಅಳವಡಿಸಲು ಸೂಚಿಸಲಾಗಿದ್ದರೆ ಕಳೆದ ಡಿಸೆಂಬರ್ನಲ್ಲಿ ವಿವಿಗಳಲ್ಲಿ ಮೋದಿ ಚಿತ್ರದ ಹಿನ್ನೆಲೆಯ ಸೆಲ್ಫೀ ಪಾಯಿಂಟ್ ರಚಿಸಲು ಯುಜಿಸಿ ದೇಶದ ವಿವಿಗಳಿಗೆ ಪತ್ರ ಬರೆದಿತ್ತು.