ಉಮರ್ ಖಾಲಿದ್ ಹಾಗೂ ಇನ್ನಿತರ ಸಿಎಎ ವಿರೋಧಿ ಹೋರಾಟಗಾರರನ್ನು ಬಿಡುಗಡೆಗೊಳಿಸಿ: 160 ಶಿಕ್ಷಣ ತಜ್ಞರು, ಹೋರಾಟಗಾರರು ಹಾಗೂ ಸಿನಿಮಾ ನಿರ್ಮಾಪಕರಿಂದ ಪತ್ರ

ಉಮರ್ ಖಾಲಿದ್ | PC : PTI
ಹೊಸದಿಲ್ಲಿ: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಪ್ರತಿಭಟಿಸಿದ್ದಕ್ಕೆ ಬಂಧನಕ್ಕೊಳಗಾಗಿರುವ ಉಮರ್ ಖಾಲಿದ್ ಹಾಗೂ ಇನ್ನಿತರರನ್ನು ಬಿಡುಗಡೆಗೆ ಆಗ್ರಹಿಸಿರುವ ಹೇಳಿಕೆಗೆ ಅಮಿತವ್ ಘೋಶ್, ನಸೀರುದ್ದೀನ್ ಶಾ, ರೋಮಿಲಾ ಥಾಪರ್, ಜಯತಿ ಘೋಶ್, ಹರ್ಷ್ ಮಂದರ್ ಹಾಗೂ ಕ್ರಿಸ್ಟೊಫೆ ಜಾಫ್ರೆಲಾಟ್ ಸೇರಿದಂತೆ 160 ಮಂದಿ ಶಿಕ್ಷಣ ತಜ್ಞರು, ಸಿನಿಮಾ ನಿರ್ಮಾಪಕರು, ನಟರು, ಹೋರಾಟಗಾರರು ಹಾಗೂ ಇನ್ನಿತರರು ಪತ್ರ ಬರೆದು ಸಹಿ ಮಾಡಿದ್ದಾರೆ.
ಜನವರಿ 30, 2025ಕ್ಕೆ ಉಮರ್ ಖಾಲಿದ್ ಬಂಧನಕ್ಕೊಳಗಾಗಿ 1600 ದಿನ ಪೂರೈಸಿದೆ. ಕಾಕತಾಳೀಯವೆಂಬಂತೆ ಇದೇ ದಿನ ಮಹಾತ್ಮ ಗಾಂಧಿಯವರ ಪುಣ್ಯತಿಥಿಯೂ ಆಗಿದೆ ಎಂಬುದರತ್ತ ಹೇಳಿಕೆಯಲ್ಲಿ ಬೊಟ್ಟು ಮಾಡಲಾಗಿದೆ. “ಈ ಕೆಳಗೆ ಸಹಿ ಮಾಡಿರುವ ನಮಗೆ ಈ ಕಾಕತಾಳೀಯತೆ ಅರಿವಿಲ್ಲದೆ ಏನಿಲ್ಲ. ಹಾಗೆಯೇ ಇದು ಗುರುತಿಸದೆ ಹೋಗಬಾರದು ಎಂಬುದು ನಮ್ಮ ಬಯಕೆಯಾಗಿದೆ” ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಯುಎಪಿಎ ಕಾಯ್ದೆಯಡಿ ಸುದೀರ್ಘ ಕಾಲ ಉಮರ್ ಖಾಲಿದ್ ರನ್ನು ಸೆರೆವಾಸದಲ್ಲಿಟ್ಟಿರುವ ಕುರಿತು ಉಲ್ಲೇಖಿಸಿರುವ ಹೇಳಿಕೆಯು, “ನಿರಂಕುಶಾಧಿಕಾರವು ಹೇಗೆ ಉಮರ್ ಖಾಲಿದ್ ರಂತಹ ಇತಿಹಾಸಕಾರನನ್ನು ಹಾಗೂ ಗಂಭೀರ ಚಿಂತಕನಾಗಿ ರೂಪಗೊಂಡ ವ್ಯಕ್ತಿಯನ್ನು ಪದೇ ಪದೇ ಗುರಿಯಾಗಿಸಿಕೊಂಡು, ದೂಷಣೆಗೆ ಗುರಿಯಾಗಿಸಿ, ಆತನನ್ನು ಖಳನನ್ನಾಗಿಸಲಾಗಿದೆ ಎಂಬುದಕ್ಕೆ ಸಾಕ್ಷಿಯಾಗುವ ಮೂಲಕ ನಾವು ತೀವ್ರವಾಗಿ ಕ್ಷೋಭೆಗೊಂಡಿದ್ದೇವೆ”, ಎಂದು ಕಳವಳ ವ್ಯಕ್ತಪಡಿಸಿದೆ.
“ಬಹುತ್ವ, ಜಾತ್ಯತೀತತೆ ಹಾಗೂ ಸಾಂವಿಧಾನಿಕ ಮೌಲ್ಯಗಳ ಪರ ತಮ್ಮ ರಾಜೀರಹಿತ ಭಾಷಣಗಳಲ್ಲಿ ವಕಾಲತ್ತು ವಹಿಸಿಕೊಂಡು ಬರುತ್ತಿರುವ ಉಮರ್ ಖಾಲಿದ್ ರನ್ನು ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದ್ದಾರೆ ಎಂಬ ನಿರ್ಲಜ್ಯವಾಗಿ ತಿರುಚಿದ ಸುಳ್ಳು ಆರೋಪದಲ್ಲಿ ಸಿಲುಕಿಸಲಾಗಿದೆ” ಎಂದೂ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
“ಸಿಎಎ ವಿರೋಧಿ ಪ್ರತಿಭಟನೆಯ ನಂತರ, ಗುಲ್ಫಿಶಾ ಫಾತಿಮಾ, ಶಾರ್ಜೀಲ್ ಇಮಾಮ್, ಖಾಲಿದ್ ಸೈಫಿ, ಮೀರನ್ ಹೈದರ್, ಅತ್ತರ್ ಖಾನ್ ಹಾಗೂ ಶಿಫಾ ಉರ್ ರಹಮಾನ್ ರಂತಹವರನ್ನೂ ಗುರಿಯಾಗಿಸಿಕೊಳ್ಳಲಾಗಿದೆ” ಎಂದು ಹೇಳಿಕೆಯಲ್ಲಿ ಹೆಸರಿಸಲಾಗಿದೆ. “ಪದೇ ಪದೇ ಜಾಮೀನು ನಿರಾಕರಣೆ ಹಾಗೂ ಯಾವುದೇ ವಿಚಾರಣೆಯಿಲ್ಲದೆ ಸುದೀರ್ಘ ಕಾಲ ಸೆರೆವಾಸದಲ್ಲಿರಿಸಿರುವುದು ಉಮರ್ ಖಾಲಿದ್ ಹಾಗೂ ಇನ್ನಿತರರ ಪ್ರಕರಣದ ಖೇದಕರ ಸಂಗತಿಯಾಗಿದೆ” ಎಂದೂ ಹೇಳಿಕೆಯಲ್ಲಿ ಬೇಸರ ವ್ಯಕ್ತಪಡಿಸಲಾಗಿದೆ.
2021ರ ದಿಲ್ಲಿ ನ್ಯಾಯಾಲಯದ ತೀರ್ಪನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ. “ಆ ತೀರ್ಪಿನಲ್ಲಿ “ಪ್ರಭುತ್ವದ ದೃಷ್ಟಿಯಲ್ಲಿ ಪ್ರತಿಭಟನೆಯ ಸಾಂವಿಧಾನಿಕ ಖಾತರಿ ಹಾಗೂ ಭಯೋತ್ಪಾದಕ ಕೃತ್ಯದ ನಡುವಿನ ಗೆರೆ ತೆಳುವಾಗಿರುವಂತೆ ತೋರುತ್ತಿದೆ ಎಂದು ನ್ಯಾಯಾಲಯ ಹೇಳಿತ್ತು” ಎಂದು ಬೊಟ್ಟು ಮಾಡಿದ್ದಾರೆ.
ಭಯೋತ್ಪಾದನೆ ನಿಗ್ರಹ ಕಾಯ್ದೆಗಳ ಬಳಕೆಯನ್ನು ಉಲ್ಲೇಖಿಸಿರುವ ಹೇಳಿಕೆಯು, “ನ್ಯಾಯಾಂಗದ ವಿಳಂಬದೊಂದಿಗೆ ಇಂತಹ ಕಾನೂನುಗಳು ವ್ಯಕ್ತಿಗಳನ್ನು ಯಾವುದೇ ವಿಚಾರಣೆಯಿಲ್ಲದೆ ಹಾಗೂ ದೋಷಿ ಎಂದು ರುಜುವಾತಾಗದೆ ಸುದೀರ್ಘ ಕಾಲದ ಸೆರೆವಾಸದಲ್ಲಿರಿಸುವ ಮೂಲಕ ಪರಿಣಾಮಕಾರಿಯಾಗಿ ಶಿಕ್ಷಿಸಬಹುದಾದ ಪರಿಸ್ಥಿತಿಯನ್ನು ನಿರ್ಮಾಣ ಮಾಡಿವೆ” ಎಂದು ಹೇಳಿದೆ.
“ಉಮರ್ ಖಾಲಿದ್ ಹಾಗೂ ಈ ಸಮಾನ ಪೌರತ್ವ ಹೋರಾಟಗಾರರು ಬಿಡುಗಡೆಗೊಂಡು, ಅವರು ಸಮಾನತೆ ಹಾಗೂ ನ್ಯಾಯಯುತ ಭವಿಷ್ಯಕ್ಕೆ ಕೊಡುಗೆ ನೀಡುವಂತಾಗಲಿ ಎಂದು ಪ್ರಾಮಾಣಿಕವಾಗಿ ಬಯಸುತ್ತೇವೆ” ಎಂದೂ ಹೇಳಿಕೆಯಲ್ಲಿ ಹೇಳಲಾಗಿದೆ.
ಸೌಜನ್ಯ: thewire.in