ಆ್ಯಂಬುಲೆನ್ಸ್ ಬಾಡಿಗೆ ತೆರಲು ಸಾಧ್ಯವಾಗದೆ ಸೋದರನ ಶವವನ್ನು ಟ್ಯಾಕ್ಸಿಯ ಮೇಲೆ ಕಟ್ಟಿ ಸಾಗಿಸಿದ ಮಹಿಳೆ
ಉತ್ತರಾಖಂಡದಲ್ಲೊಂದು ಆಘಾತಕಾರಿ ಘಟನೆ
PC : X/@SachinGuptaUP
ಡೆಹ್ರಾಡೂನ್: ಆ್ಯಂಬುಲೆನ್ಸ್ನ ದುಬಾರಿ ಬಾಡಿಗೆಯನ್ನು ಭರಿಸಲಾಗದೆ ಮಹಿಳೆಯೋರ್ವಳು ಆತ್ಮಹತ್ಯೆ ಮಾಡಿಕೊಂಡಿದ್ದ ತನ್ನ ಸೋದರನ ಶವವನ್ನು ಟ್ಯಾಕ್ಸಿಯ ಛಾವಣಿಯ ಮೇಲೆ ಕಟ್ಟಿ 185 ಕಿ.ಮೀ.ದೂರದ ಸ್ವಗ್ರಾಮಕ್ಕೆ ಸಾಗಿಸಿದ ಆಘಾತಕಾರಿ ಘಟನೆ ಉತ್ತರಾಖಂಡದ ನೈನಿತಾಲ್ ಜಿಲ್ಲೆಯ ಹಲ್ದ್ವಾನಿಯಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡಿದ್ದ ಸೋದರನ ಮರಣೋತ್ತರ ಪರೀಕ್ಷೆಯ ಬಳಿಕ ಹಲ್ದ್ವಾನಿಯ ಶವಾಗಾರದಿಂದ ಶಿವಾನಿಯ ಸ್ವಗ್ರಾಮ ಬೇರಿನಾಗಕ್ಕೆ ಮೃತದೇಹವನ್ನು ಸಾಗಿಸಲು ಆ್ಯಂಬುಲನ್ಸ್ ಸೇವೆಯು 12,000 ರೂ.ಬಾಡಿಗೆಯನ್ನು ಕೇಳಿತ್ತು. ಅಷ್ಟೊಂದು ಹಣವನ್ನು ಪಾವತಿಸಲು ಶಿವಾನಿ ಅಸಮರ್ಥಳಾಗಿದ್ದಳು, ನೆರವಿಗಾಗಿ ಆಕೆಯ ಮೊರೆ ಅಲ್ಲಿದ್ದ ಯಾರಿಗೂ ಕೇಳಿಸಿರಲಿಲ್ಲ. ಅಂತಿಮವಾಗಿ ಬೇರೆ ದಾರಿಯಿಲ್ಲದೆ ಟ್ಯಾಕ್ಸಿಯ ಛಾವಣಿಯ ಮೇಲೆ ಸೋದರನ ಮೃತದೇಹವನ್ನು ಕಟ್ಟಿ ಮನೆಗೆ ಸಾಗಿಸುವಂತಾಗಿತ್ತು.
ಶಿವಾನಿ ಹಲ್ದ್ವಾನಿ ತಾಲೂಕಿನ ಹಲ್ದುಚೌರ್ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದು,ಆಕೆಯ ತಂದೆ ಗೋವಿಂದ ಪ್ರಸಾದ ಮತ್ತು ಪತ್ನಿ ತಮ್ಮ 20ರ ಹರೆಯದ ಪುತ್ರ ಅಭಿಷೇಕ್ ಕುಮಾರನನ್ನು ಆಕೆಯೊಂದಿಗೆ ಕಳುಹಿಸಿದ್ದರು. ಶುಕ್ರವಾರ ಬೆಳಿಗ್ಗೆ ಅಕ್ಕ-ತಮ್ಮ ಜೊತೆಯಾಗಿಯೇ ಕೆಲಸಕ್ಕೆ ತೆರಳಿದ್ದರು. ಆದರೆ ತಲೆ ನೋಯುತ್ತಿದೆ ಎಂದು ಹೇಳಿ ಅಭಿಷೇಕ ಮನೆಗೆ ಮರಳಿದ್ದ. ಮಧ್ಯಾಹ್ನ ಊಟಕ್ಕೆಂದು ಶಿವಾನಿ ಮನೆಗೆ ಮರಳಿದಾಗ ಅಭಿಷೇಕ ಅಲ್ಲಿರಲಿಲ್ಲ ಮತ್ತು ಆತನ ಕೋಣೆಯಲ್ಲಿ ಔಷಧಿಯ ಅಸಹನೀಯ ವಾಸನೆ ಅಡರಿತ್ತು, ಹುಡುಕಾಡಿದಾಗ ಮನೆ ಸಮೀಪದ ರೈಲ್ವೆ ಹಳಿಯಲ್ಲಿ ಬಿದ್ದಿದ್ದ ಅಭಿಷೇಕ ಪತ್ತೆಯಾಗಿದ್ದ. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪೋಲಿಸರು ವಿಷ ಸೇವಿಸಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಆತನನ್ನು ಹಲ್ದ್ವಾನಿಯ ಡಾ.ಸುಶೀಲಾ ತಿವಾರಿ ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದರು,ಆದರೆ ಆ ವೇಳೆಗಾಗಲೇ ಆತ ಮೃತಪಟ್ಟಿದ್ದ.