ವೈದ್ಯಕೀಯ ತಪಾಸಣೆಗೆ ಆಸ್ಪತ್ರೆಗೆ ದಾಖಲು: ಅನಾರೋಗ್ಯದ ಕುರಿತ ವದಂತಿಗೆ ರತನ್ ಟಾಟಾ ಸ್ಪಷ್ಟನೆ
ರತನ್ ಟಾಟಾ (Photo: PTI)
ಮಹಾರಾಷ್ಟ್ರ: ವೈದ್ಯಕೀಯ ತಪಾಸಣೆಗೆ ನಾನು ಆಸ್ಪತ್ರೆಗೆ ದಾಖಲಾಗಿದ್ದೇನೆ. ನನ್ನ ಆರೋಗ್ಯ ಸ್ಥಿರವಾಗಿದೆ, ಯಾರೂ ಕೂಡ ಆತಂಕ ಪಡುವ ಅಗತ್ಯವಿಲ್ಲ ಎಂದು ಕೈಗಾರಿಕೋದ್ಯಮಿ, ಟಾಟಾ ಸನ್ಸ್ ಮಾಜಿ ಮುಖ್ಯಸ್ಥ ರತನ್ ಟಾಟಾ ಅವರು ತಿಳಿಸಿದ್ದಾರೆ.
ವಯೋಸಹಜ ಅನಾರೋಗ್ಯದ ಕುರಿತ ಚಿಕಿತ್ಸೆಗೆ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ರತನ್ ಟಾಟಾ ದಾಖಲಾಗಿದ್ದರು.
86ರ ಹರೆಯದ ರತನ್ ಟಾಟಾ ಅವರನ್ನು ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಪರೀಕ್ಷೆ ನಡೆಸಿದಾಗ ಬಿಪಿ ಲೋ ಕಂಡು ಬಂದಿದ್ದು, ಅವರನ್ನು ಐಸಿಯುಗೆ ದಾಖಲಿಸಲಾಗಿದೆ. ಹೃದ್ರೋಗ ತಜ್ಞರಾದ ಡಾ.ಶಾರುಖ್ ಆಸ್ಪಿ ಗೋಲ್ವಾಲಾ ಅವರ ನೇತೃತ್ವದ ತಂಡ ರತನ್ ಟಾಟಾ ಅವರ ಆರೋಗ್ಯದ ಮೇಲ್ವಿಚರಾಣೆ ನಡೆಸುತ್ತಿದೆ ಎಂದು ಈ ಮೊದಲು ವರದಿಯಾಗಿತ್ತು.
ಈ ಕುರಿತು ಇನ್ಸ್ಟಾಗ್ರಾಂನಲ್ಲಿ ಹೇಳಿಕೆ ಬಿಡುಗಡೆ ಮಾಡಿದ ರತನ್ ಟಾಟಾ, ನನ್ನ ಆರೋಗ್ಯದ ಬಗ್ಗೆ ಇತ್ತೀಚಿಗೆ ಹರಡಿರುವ ವದಂತಿಯ ಬಗ್ಗೆ ನನಗೆ ತಿಳಿದಿದೆ. ನಾನು ವಯೋಸಹಜ ಅನಾರೋಗ್ಯಕ್ಕೆ ಸಂಬಂಧಿಸಿ ವೈದ್ಯಕೀಯ ಪರೀಕ್ಷೆಗೆ ಒಳಗಾಗಿದ್ದೇನೆ. ನಾನು ಆರೋಗ್ಯವಾಗಿದ್ದೇನೆ, ಯಾವುದೇ ಆತಂಕ ಪಡುವ ಅವಶ್ಯಕತೆಯಿಲ್ಲ. ಮಾಧ್ಯಮಗಳು ಈ ಬಗ್ಗೆ ತಪ್ಪು ಮಾಹಿತಿ ಪ್ರಸಾರ ಮಾಡದಂತೆ ಕೇಳಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ.