ಸಂಜಯ್ ರಾವತ್ ನಿವಾಸದ ಪರಿಶೀಲನೆ ನಡೆಸುತ್ತಿದ್ದ ಅಪರಿಚಿತ ವ್ಯಕ್ತಿಗಳು ಕ್ಯಾಮೆರಾದಲ್ಲಿ ಸೆರೆ
ಸಂಜಯ್ ರಾವತ್ | PC : PTI
ಮುಂಬೈ : ಶಿವಸೇನೆ (ಉದ್ಧವ್ ಬಣ) ನಾಯಕ ಹಾಗೂ ರಾಜ್ಯಸಭಾ ಸಂಸದ ಸಂಜಯ್ ರಾವತ್ ಅವರು ಸಂಸತ್ ಅಧಿವೇಶನದಲ್ಲಿ ಭಾಗವಹಿಸಲು ಹೊಸದಿಲ್ಲಿಗೆ ತೆರಳಿದ್ದಾಗ, ಇಬ್ಬರು ಅಪರಿಚಿತ ಬೈಕ್ ಸವಾರರು ಮುಂಬೈನಲ್ಲಿರುವ ಅವರ ನಿವಾಸವನ್ನು ಪರಿಶೀಲಿಸುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಸಂಜಯ್ ರಾವತ್ ಅವರ ಸಹೋದರ ಹಾಗೂ ಶಿವಸೇನೆ(ಉದ್ಧವ್ ಬಣ)ಯ ವಿಖ್ರೋಲಿ ವಿಧಾನಸಭಾ ಕ್ಷೇತ್ರದ ಶಾಸಕ ಸುನೀಲ್ ರಾವತ್, ಇದು ಗಂಭೀರ ಘಟನೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ನಾಗಪುರದಲ್ಲಿ ಮಹಾರಾಷ್ಟ್ರ ವಿಧಾನಸಭಾ ಅಧಿವೇಶನ ನಡೆಯುವಾಗ ಈ ಘಟನೆ ನಡೆದಿದೆ.
ಶಿವಸೇನೆಯ ಮುಖವಾಣಿ ‘ಸಾಮ್ನಾ’ದ ಕಾರ್ಯಕಾರಿ ಸಂಪಾದಕ ಹಾಗೂ ಶಿವಸೇನೆ (ಉದ್ಧವ್ ಬಣ) ವಕ್ತಾರರಾಗಿರುವ ಸಂಜಯ್ ರಾವತ್, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯ ನಿಕಟವರ್ತಿಯಾಗಿದ್ದಾರೆ.
ಮುಂಬೈನ ಭಾಂಡೂಪ್ ನಲ್ಲಿರುವ ರಾವತ್ ಅವರ ಬಂಗಲೆ ‘ಮೈತ್ರಿ’ ಎದುರು ಇಬ್ಬರು ವ್ಯಕ್ತಿಗಳು ಕಂಡು ಬಂದಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.
“ನನ್ನ ನಿವಾಸ ಮಾತ್ರವಲ್ಲ; ಸಾಮ್ನಾ ಕಚೇರಿ ಹಾಗೂ ದಿಲ್ಲಿಯಲ್ಲಿನ ನನ್ನ ನಿವಾಸದ ಮೇಲೂ ಬೇಹುಗಾರಿಕೆ ನಡೆಸಲಾಗುತ್ತಿದೆ” ಎಂದು ಸಂಜಯ್ ರಾವತ್ ಆರೋಪಿಸಿದ್ದಾರೆ.
ಈ ಘಟನೆಯ ನಂತರ, ಸಂಜಯ್ ರಾವತ್ ಅವರ ಬಂಗಲೆಯನ್ನು ಪರಿಶೀಲಿಸಿದ ಉನ್ನತ ಪೊಲೀಸ್ ಅಧಿಕಾರಿಗಳು, ಅವರ ನಿವಾಸದೆದುರು ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಿದ್ದಾರೆ.