ಕೇಂದ್ರ ಸರ್ಕಾರಿ ನೌಕರರಿಗೆ ಏಕೀಕೃತ ಪಿಂಚಣಿ ಯೋಜನೆ ಏಪ್ರಿಲ್ ನಿಂದ ಜಾರಿ

ಸಾಂದರ್ಭಿಕ ಚಿತ್ರ PC: PTI
ಹೊಸದಿಲ್ಲಿ: ಕೇಂದ್ರ ಸರ್ಕಾರಿ ನೌಕರರಿಗೆ ಏಕೀಕೃತ ಪಿಂಚಣಿ ಯೋಜನೆ (ಯುಪಿಎಸ್) ಈ ವರ್ಷದ ಏಪ್ರಿಲ್ ಒಂದರಿಂದ ಜಾರಿಗೆ ಬರಲಿದೆ. ಎಲ್ಲ ಕೇಂದ್ರ ಸರ್ಕಾರಿ ನೌಕರರಿಗೆ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್ಪಿಎಸ್)ನಲ್ಲಿ ಯುಪಿಎಸ್ ಅನ್ನು ಹೆಚ್ಚುವರಿ ಆಯ್ಕೆಯಾಗಿ ಪರಿಚಯಿಸಲು ಸರ್ಕಾರ ನಿರ್ಧರಿಸಿದೆ.
ಈ ಸಂಬಂಧ ಶನಿವಾರ ಅಧಿಸೂಚನೆ ಹೊರಡಿಸಲಾಗಿದ್ದು, ಹಾಲಿ ಅಥವಾ ಭವಿಷ್ಯದ ಕೇಂದ್ರ ಸರ್ಕಾರಿ ಉದ್ಯೋಗಿಗಳು ಏಕೀಕೃತ ಪಿಂಚಣಿ ಯೋಜನೆ ಆಯ್ಕೆ ಮಾಡಿಕೊಂಡ ಬಳಿಕ ಮತ್ತೆ ಎನ್ ಪಿಎಸ್ ಗೆ ಮರಳಲು ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ರಾಜ್ಯ ಸರ್ಕಾರಗಳು ಕೂಡಾ ತಮ್ಮ ಉದ್ಯೋಗಿಗಳಿಗೆ ಈ ಯೋಜನೆಯನ್ನು ಅನುಷ್ಠಾನಕ್ಕೆ ತರಬಹುದಾಗಿದೆ. 2024ರ ಮಾರ್ಚ್ 31ಕ್ಕೆ ಇದ್ದಂತೆ ಎನ್ ಪಿಎಸ್ ಗೆ 26 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 66 ಲಕ್ಷ ರಾಜ್ಯ ಸರ್ಕಾರಿ ನೌಕರರು ದೇಣಿಗೆ ನೀಡುತ್ತಿದ್ದಾರೆ. ಎನ್ ಪಿಎಸ್ ಅಡಿಯಲ್ಲಿ ಇರುವ 11.7 ಲಕ್ಷ ಕೋಟಿ ರೂಪಾಯಿ ಪೈಕಿ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರ ಪಾಲು 9 ಲಕ್ಷ ಕೋಟಿ ರೂಪಾಯಿ.
ಈ ಯೋಜನೆಯಡಿ ಕನಿಷ್ಠ 25 ವರ್ಷಗಳ ಕಾಲ ಸೇವೆ ಸಲ್ಲಿಸಿದ ಉದ್ಯೋಗಿಗಳು ನಿವೃತ್ತರಾದ ತಕ್ಷಣ ಕೊನೆಯ 12 ತಿಂಗಳ ಸರಾಸರಿ ಮೂಲವೇತನದ ಶೇಕಡ 50ನ್ನು ಪಿಂಚಣಿ ರೂಪದಲ್ಲಿ ನೀಡುವ ಖಾತರಿ ಒದಗಿಸುತ್ತದೆ. ಅದರಂತೆ 25 ವರ್ಷಕ್ಕಿಂತ ಕಡಿಮೆ ಅವಧಿಯ ಆದರೆ 10 ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿಸಿದವರಿಗೆ 10 ಸಾವಿರ ರೂಪಾಯಿ ಮಾಸಿಕ ಪಿಂಚಣಿ ನೀಡಲಾಗುತ್ತದೆ. ಒಂದು ವೇಳೆ 25 ವರ್ಷ ಸೇವೆ ಸಲ್ಲಿಸಿದ ಬಳಿಕ ಸ್ವಯಂ ನಿವೃತ್ತಿ ಪಡೆದು ಬೇರೆಡೆ ಸೇವೆ ಮುಂದುವರಿಸಿದರೆ, ಅಲ್ಲಿ ನಿವೃತ್ತರಾದ ಬಳಿಕ ಪಿಂಚಣಿ ಆರಂಭವಾಗುತ್ತದೆ.
ಪಿಂಚಣಿದಾರ ಮೃತಪಟ್ಟ ಸಂದರ್ಭದಲ್ಲಿ ಆತನ ಕುಟುಂಬ ಆತ ಪಡೆಯುತ್ತಿದ್ದ ಪಿಂಚಣಿಯ ಶೇಕಡ 60ರಷ್ಟು ಮೊತ್ತ ಪಡೆಯುತ್ತದೆ.