ʼಏಂಜೆಲ್ ಟ್ಯಾಕ್ಸ್ʼ ರದ್ದು: ಸ್ಟಾರ್ಟ್ಅಪ್ ಹೂಡಿಕೆದಾರರು ನಿರಾಳ
ಕೇಂದ್ರ ಬಜೆಟ್ 2024
ವಿತ್ತಸಚಿವೆ ನಿರ್ಮಲಾ ಸೀತಾರಾಮನ್ (PTI)
ಹೊಸದಿಲ್ಲಿ,: ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ತನ್ನ ಮುಂಗಡಪತ್ರ ಭಾಷಣದಲ್ಲಿ ಸ್ಟಾರ್ಟ್ಅಪ್ಗಳು ಅಥವಾ ನವೋದ್ಯಮಗಳ ಮೇಲಿನ ಏಂಜೆಲ್ ಟ್ಯಾಕ್ಸ್ (ಬಂಡವಾಳ ಹೂಡಿಕೆಯ ಮೇಲಿನ ತೆರಿಗೆ) ಅನ್ನು ರದ್ದುಗೊಳಿಸುವುದಾಗಿ ಪ್ರಕಟಿಸಿದ್ದಾರೆ. ಎಲ್ಲ ವರ್ಗಗಳ ಹೂಡಿಕೆದಾರರಿಗೆ ಈ ತೆರಿಗೆಯನ್ನು ತೆಗೆದುಹಾಕಲಾಗುವುದು ಎಂದು ಅವರು ತಿಳಿಸಿದರು.
ಶೇರು ವಿನಿಮಯ ಕೇಂದ್ರಗಳಲ್ಲಿ ಲಿಸ್ಟ್ ಆಗಿರದ ಕಂಪನಿಗಳು ಶೇರುಗಳ ವಿತರಣೆಯ ಮೂಲಕ ಭಾರತೀಯ ಹೂಡಿಕೆದಾರರಿಂದ ಬಂಡವಾಳವನ್ನು ಸಂಗ್ರಹಿಸಿದ್ದರೆ ಮತ್ತು ಇಂತಹ ಶೇರುಗಳ ಬೆಲೆಗಳು ಕಂಪನಿಯ ನ್ಯಾಯಯುತ ಮಾರುಕಟ್ಟೆ ಮೌಲ್ಯಕ್ಕಿಂತ ಹೆಚ್ಚಾದಾಗ ಈ ಏರಿಕೆಯನ್ನು ಆದಾಯವೆಂದು ಪರಿಗಣಿಸಲಾಗುತ್ತದೆ ಮತ್ತು ಅದಕ್ಕೆ ಏಂಜೆಲ್ ಟ್ಯಾಕ್ಸ್ ವಿಧಿಸಲಾಗುತ್ತದೆ. ಪ್ರಸಕ್ತ ಸುಮಾರು ಶೇ.30ರಷ್ಟು ಏಂಜೆಲ್ ತೆರಿಗೆಯನ್ನು ವಿಧಿಸಲಾಗುತ್ತಿದೆ.
ನವೋದ್ಯಮಗಳ ಆರಂಭಿಕ ಹಂತದಲ್ಲಿ ಹೂಡಿಕೆದಾರರನ್ನು ಏಂಜೆಲ್ ಹೂಡಿಕೆದಾರರು ಎಂದು ಕರೆಯಲಾಗುತ್ತದೆ, ಹೀಗಾಗಿ ಇದಕ್ಕೆ ಏಂಜೆಲ್ ಟ್ಯಾಕ್ಸ್ ಎಂಬ ಹೆಸರು ಬಂದಿದೆ. 2012ರ ಬಜೆಟ್ನಲ್ಲಿ ಆಗಿನ ಯುಪಿಎ-2 ಸರಕಾರದ ವಿತ್ತಸಚಿವ ಪ್ರಣವ್ ಮುಖರ್ಜಿಯವರು ಮೊದಲ ಬಾರಿಗೆ ಏಂಜೆಲ್ ಟ್ಯಾಕ್ಸ್ ಪರಿಚಯಿಸಿದ್ದರು.
ಬಜೆಟ್ ಮಂಡನೆಗೆ ಮುನ್ನ ಹಲವಾರು ನವೋದ್ಯಮಗಳು ಮತ್ತು ತಜ್ಞರು ಸ್ಟಾರ್ಟ್ಅಪ್ಗಳಿಗೆ ಏಂಜೆಲ್ ತೆರಿಗೆಯನ್ನು ತರ್ಕಬದ್ಧಗೊಳಿಸುವ ಅಗತ್ಯವಿದೆ ಎಂದು ಹೇಳಿದ್ದರು. ವಾಸ್ತವದಲ್ಲಿ ಇದು ಬಂಡವಾಳ ಸಂಗ್ರಹಣೆಯಲ್ಲಿ ಏಂಜೆಲ್ ಟ್ಯಾಕ್ ತೊಡಕು ಎಂದು ಪರಿಗಣಿಸಿದ್ದ ಭಾರತೀಯ ಸ್ಟಾರ್ಟ್ಅಪ್ಗಳ ದೀರ್ಘಕಾಲಿಕ ಬೇಡಿಕೆಯಾಗಿತ್ತು.
2019ರಲ್ಲಿ ಕೇಂದ್ರವು ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆಯಲ್ಲಿ ನೋಂದಾಯಿತ ಸ್ಟಾರ್ಟ್ಅಪ್ಗಳಿಗೆ ಏಂಜೆಲ್ ಟ್ಯಾಕ್ಸ್ನಿಂದ ವಿನಾಯಿತಿಯನ್ನು ಪ್ರಕಟಿಸಿತ್ತು.