7 ನೂತನ ರೈಲ್ವೇ ಯೋಜನೆಗಳಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ
ಸಾಂದರ್ಭಿಕ ಚಿತ್ರ.| Photo: PTI
ಹೊಸದಿಲ್ಲಿ: ರೂ. 32,500 ಕೋಟಿ ವೆಚ್ಚದ ಏಳು ನೂತನ ರೈಲ್ವೇ ಯೋಜನೆಗಳಿಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅಂಗೀಕಾರ ನೀಡಿದೆ.
ಈ ಪ್ರಸ್ತಾಪಿತ ಯೋಜನೆಗಳು ದಿನವೊಂದರಲ್ಲಿ ಓಡುವ ರೈಲುಗಳ ಸಂಖ್ಯೆಯನ್ನು ಹೆಚ್ಚಿಸುವ, ರೈಲು ನಿರ್ವಹಣೆಯನ್ನು ಸರಳಗೊಳಿಸುವ, ದಟ್ಟಣೆಯನ್ನು ಕಡಿಮೆ ಮಾಡುವ ಹಾಗೂ ಪ್ರಯಾಣ ಮತ್ತು ಸರಕು ಸಾಗಾಟವನ್ನು ಹಿತವಾಗಿಸುವ ಉದ್ದೇಶಗಳನ್ನು ಹೊಂದಿವೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದರು.
ಉತ್ತರಪ್ರದೇಶ, ಬಿಹಾರ, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ಗುಜರಾತ್, ಒಡಿಶಾ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳ- ಈ ಒಂಭತ್ತು ರಾಜ್ಯಗಳಲ್ಲಿರುವ 35 ಜಿಲ್ಲೆಗಳಲ್ಲಿ ಈ ಯೋಜನೆಗಳು ಜಾರಿಗೆ ಬರುತ್ತವೆ.
ಈ ಯೋಜನೆಗಳು ಭಾರತೀಯ ರೈಲ್ವೇಯ ಹಾಲಿ ರೈಲು ಜಾಲಕ್ಕೆ 2,339 ಕಿ.ಮೀ. ಹೆಚ್ಚುವರಿ ಹಳಿಯನ್ನು ಸೇರಿಸುವ ಉದ್ದೇಶವನ್ನು ಹೊಂದಿವೆ.
ಡಿಜಿಟಲ್ ಇಂಡಿಯಾ ಯೋಜನೆ ವಿಸ್ತರಣೆ
14,903 ಕೋಟಿ ರೂಪಾಯಿ ವೆಚ್ಚದ ಡಿಜಿಟಲ್ ಇಂಡಿಯಾ ಯೋಜನೆಯ ವಿಸ್ತರಣೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅಂಗೀಕಾರ ನೀಡಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದರು.
ಹಿಂದಿನ ಯೋಜನೆಯಡಿಯಲ್ಲಿ ಮಾಡಲಾದ ಕೆಲಸವನ್ನು ವಿಸ್ತರಿತ ಡಿಜಿಟಲ್ ಇಂಡಿಯಾ ಯೋಜನೆಯು ಮುಂದುವರಿಸಿಕೊಂಡು ಹೋಗುವುದು ಎಂದು ಸಚಿವರು ತಿಳಿಸಿದರು.
‘‘ಡಿಜಿಟಲ್ ಇಂಡಿಯಾ ಕಾರ್ಯಕ್ರಮಕ್ಕೆ ಸಚಿವ ಸಂಪುಟ ಸಭೆಯಲ್ಲಿ ಪ್ರಧಾನಿ ಅಂಗೀಕಾರ ನೀಡಿದ್ದಾರೆ. ಈ ಯೋಜನೆಗೆ 14,903 ಕೋಟಿ ರೂಪಾಯಿ ಮೊತ್ತವನ್ನು ಮೀಸಲಿಡಲಾಗಿದೆ’’ ಎಂದು ವೈಷ್ಣವ್ ಹೇಳಿದರು.
ಈ ಯೋಜನೆಯಡಿ, 5.25 ಲಕ್ಷ ಮಾಹಿತಿ ತಂತ್ರಜ್ಞಾನ ಕೆಲಸಗಾರರಿಗೆ ಕೌಶಲ್ಯ ಹೆಚ್ಚಿಸುವ ತರಬೇತಿ ನೀಡಲಾಗುವುದು ಮತ್ತು 2.65 ಲಕ್ಷ ಜನರಿಗೆ ಮಾಹಿತಿ ತಂತ್ರಜ್ಞಾನದಲ್ಲಿ ತರಬೇತಿ ನೀಡಲಾಗುವುದು ಎಂದು ಅವರು ತಿಳಿಸಿದರು.
ಈ ಯೋಜನೆಯಲ್ಲಿ, ನ್ಯಾಶನಲ್ ಸೂಪರ್ಕಂಪ್ಯೂಟಿಂಗ್ ಮಿಶನ್ (ಎನ್ಸಿಎಮ್)ಗೆ ಇನ್ನೂ 9 ಸೂಪರ್ ಕಂಪ್ಯೂಟರ್ಗಳನ್ನು ಸೇರಿಸಲಾಗುವುದು.
ವಿಶ್ವಕರ್ಮ ಯೋಜನೆಗೆ ಅಂಗೀಕಾರ
ಕೆಂದ್ರ ಸಚಿವ ಸಂಪುಟವು ಬುಧವಾರ 13,000 ಕೋಟಿ ರೂಪಾಯಿ ವೆಚ್ಚದ ವಿಶ್ವಕರ್ಮ ಯೋಜನೆಗೆ ಅನುಮೋದನೆ ನೀಡಿದೆ.
ಈ ಯೋಜನೆಯ ಪ್ರಯೋಜನವನ್ನು ನೇಕಾರರು, ಅಕ್ಕಸಾಲಿಗರು, ಕಮ್ಮಾರರು, ಮಡಿವಾಳರು ಮತ್ತು ಕ್ಷೌರಿಕರು ಸೇರಿದಂತೆ ಸುಮಾರು 30 ಲಕ್ಷ ಸಾಂಪ್ರದಾಯಿಕ ಕುಶಲಕರ್ಮಿಗಳು ಪಡೆಯಲಿದ್ದಾರೆ.
ಈ ಯೋಜನೆಯಡಿಯಲ್ಲಿ, ಮೊದಲ ಹಂತದಲ್ಲಿ ಸರಕಾರವು ಕುಶಲಕರ್ಮಿಗಳಿಗೆ ಪ್ರಾಥಮಿಕ ಮತ್ತು ಸುಧಾರಿತ ಕೌಶಲ ತರಬೇತಿ ಕಾರ್ಯಕ್ರಮಗಳನ್ನು ಏರ್ಪಡಿಸುವುದು. ತರಬೇತಿಯ ವೇಳೆ, ದಿನಕ್ಕೆ 500 ರೂ. ಭತ್ತೆ ನೀಡಲಾಗುವುದು. ತರಬೇತಿ ಪಡೆದವರಿಗೆ ಆಧುನಿಕ ಸಲಕರಣೆಗಳನ್ನು ಖರೀದಿಸುವುದಕ್ಕಾಗಿ 15,000 ರೂ.ವರೆಗೆ ನೆರವು ಮತ್ತು ಒಂದು ಲಕ್ಷ ರೂಪಾಯಿವರೆಗೆ ಗರಿಷ್ಠ 5% ಬಡ್ಡಿ ದರದಲ್ಲಿ ಸಾಲ ನೀಡಲಾಗುವುದು ಎಂದು ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದರು.
ಎರಡನೇ ಹಂತದಲ್ಲಿ, 2 ಲಕ್ಷ ರೂಪಾಯಿವರೆಗೆ ಸಾಲ ಸೌಲಭ್ಯ ಮತ್ತು ಮಾರುಕಟ್ಟೆ ಸೌಲಭ್ಯವನ್ನು ಒದಗಿಸಲಾಗುವುದು.
‘ಪಿಎಮ್ ಇ-ಬಸ್ ಸೇವಾ’ ಯೋಜನೆಗೆ ಅಂಗೀಕಾರ
ಮಾಲಿನ್ಯರಹಿತ ಸಂಚಾರಕ್ಕೆ ಉತ್ತೇಜನ ನೀಡುವ ದೃಷ್ಟಿಯಿಂದ ನಗರಗಳಲ್ಲಿ ‘ಪಿಎಮ್ ಇ-ಬಸ್ ಸೇವಾ’ ಯೋಜನೆಯನ್ನು ಜಾರಿಗೆ ತರಲು ಕೇಂದ್ರ ಸಚಿವ ಸಂಪುಟ ಬುಧವಾರ ಅಂಗೀಕಾರ ನೀಡಿದೆ.
ಈ ಯೋಜನೆಯಲ್ಲಿ ಸಂಘಟಿತ ಬಸ್ ಸೇವೆ ಇಲ್ಲದ ನಗರಗಳಿಗೆ ಆದ್ಯತೆ ನೀಡಲಾಗುವುದು ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ತಿಳಿಸಿದರು.
ಯೋಜನೆಯಡಿ, ಸರಕಾರಿ-ಖಾಸಗಿ ಭಾಗೀದಾರಿಕೆ (ಪಿಪಿಪಿ) ಮಾದರಿಯಲ್ಲಿ 169 ನಗರಗಳಲ್ಲಿ 10,000 ಇ-ಬಸ್ಗಳನ್ನು ನಿಯೋಜಿಸಲಾಗುವುದು. ಮಾಲಿನ್ಯರಹಿತ ನಗರ ಸಂಚಾರ ಯೋಜನೆಯಡಿ 181 ನಗರಗಳ ಮೂಲಸೌಕರ್ಯಗಳನ್ನು ಮೇಲ್ದರ್ಜೆಗೇರಿಸಲಾಗುವುದು ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೇಳಿದರು.
ಯೋಜನೆಯ ಒಟ್ಟು ವೆಚ್ಚ 57,613 ಕೋಟಿ ರೂಪಾಯಿ ಎಂಬುದಾಗಿ ಅಂದಾಜಿಸಲಾಗಿದೆ. ಈ ಪೈಕಿ, ಕೇಂದ್ರ ಸರಕಾರವು 20,000 ಕೋಟಿ ರೂಪಾಯಿಯನ್ನು ಒದಗಿಸುವುದು.