ಅನುಮತಿ ಇಲ್ಲದೆ ಬಡ್ಡಿ ದರ ಘೋಷಿಸದಂತೆ ಭವಿಷ್ಯ ನಿಧಿ ಸಂಸ್ಥೆಗೆ ಕೇಂದ್ರ ಹಣಕಾಸು ಸಚಿವಾಲಯ ಸೂಚನೆ
Photo: PTI
ಹೊಸದಿಲ್ಲಿ: 2023-24ರ ಹಣಕಾಸು ವರ್ಷದಿಂದ ಅನುಮೋದನೆಯಿಲ್ಲದೆ ಬಡ್ಡಿದರವನ್ನು ಘೋಷಿಸದಂತೆ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಅಥವಾ ಇಪಿಎಫ್ಒಗೆ ಕೇಂದ್ರ ಹಣಕಾಸು ಸಚಿವಾಲಯವು ತಿಳಿಸಿದೆ ಎಂದು ಎರಡು ಇಲಾಖೆಗಳ ನಡುವಿನ ಸಂವಹನವನ್ನು ಉಲ್ಲೇಖಿಸಿ The Indian Express ರವಿವಾರ ವರದಿ ಮಾಡಿದೆ.
ಕಾರ್ಮಿಕ ಹಾಗೂ ಉದ್ಯೋಗ ಸಚಿವಾಲಯದ ಅಡಿಯಲ್ಲಿ ಬರುವ ಇಪಿಎಫ್ಒ ಸುಮಾರು ಆರು ಕೋಟಿ ಸಕ್ರಿಯ ಚಂದಾದಾರರೊಂದಿಗೆ ದೇಶದ ಅತಿದೊಡ್ಡ ನಿವೃತ್ತಿ ನಿಧಿಯನ್ನು ನಿರ್ವಹಿಸುತ್ತಿದೆ.
20ಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಕಂಪನಿಗಳಲ್ಲಿ ತಿಂಗಳಿಗೆ 15,000 ರೂ.ವರೆಗೆ ವೇತನ ಪಡೆಯುವ ಕಾರ್ಮಿಕರಿಗೆ ಭವಿಷ್ಯ ನಿಧಿ ಖಾತೆಗಳು ಕಡ್ಡಾಯವಾಗಿದೆ. ಉದ್ಯೋಗಿಯ ಮೂಲ ವೇತನದ ಕನಿಷ್ಠ 12 ಶೇ. ರಷ್ಟು ಭವಿಷ್ಯ ನಿಧಿಯಲ್ಲಿ ಠೇವಣಿ ಮಾಡಲು ಕಡ್ಡಾಯವಾಗಿ ಕಡಿತಗೊಳಿಸಲಾಗುತ್ತದೆ. ಉದ್ಯೋಗದಾತರು ಹೊಂದಾಣಿಕೆಯ ಮೊತ್ತವನ್ನು ಕೊಡುಗೆ ನೀಡುತ್ತಾರೆ.
ಇಪಿಎಫ್ ಒದ ಕೇಂದ್ರೀಯ ಟ್ರಸ್ಟಿಗಳ ಮಂಡಳಿಯು ವಾರ್ಷಿಕ ಸಭೆಯನ್ನು ನಡೆಸಿ ಬಡ್ಡಿ ದರವನ್ನು ನಿರ್ಧರಿಸುತ್ತದೆ ನಂತರ ಅದನ್ನು ಪ್ರಕಟಿಸುತ್ತದೆ. ನಂತರ ಶಿಫಾರಸನ್ನು ಅದರ ಅನುಮೋದನೆಗಾಗಿ ಹಣಕಾಸು ಸಚಿವಾಲಯಕ್ಕೆ ಕಳುಹಿಸಲಾಗುತ್ತದೆ.