ಚುನಾವಣೆಗಳಿಗೆ ಮುನ್ನ ಮಣಿಪುರಕ್ಕೆ ಗೃಹಸಚಿವ ಅಮಿತ್ ಶಾ ಭೇಟಿ ಸಾಧ್ಯತೆ
Photo: PTI
ಇಂಫಾಲ : ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಲೋಕಸಭಾ ಚುನಾವಣೆಗಳಿಗೆ ಮುನ್ನ ಮಣಿಪುರಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ ಎಂದು ಬಲ್ಲ ಮೂಲಗಳನ್ನು ಉಲ್ಲೇಖಸಿ theprint.in ವರದಿ ಮಾಡಿದೆ. ಕಳೆದ ವರ್ಷ ಜನಾಂಗೀಯ ಹಿಂಸಾಚಾರ ಭುಗಿಲೆದ್ದ ಬಳಿಕ ಇದು ಮಣಿಪುರಕ್ಕೆ ಶಾ ಅವರ ಎರಡನೇ ಭೇಟಿಯಾಗಲಿದೆ.
2023,ಮೇ 3ರಂದು ಮಣಿಪುರದಲ್ಲಿ ಜನಾಂಗೀಯ ಸಂಘರ್ಷಗಳು ಆರಂಭಗೊಂಡ ಬಳಿಕ ಶಾ ಒಮ್ಮೆ ಮಾತ್ರ ಅಲ್ಲಿಗೆ ಭೇಟಿ ನೀಡಿದ್ದರಿಂದ ರಾಜ್ಯಕ್ಕೆ ಅವರ ಸಂಭವನೀಯ ಪ್ರವಾಸವು ಮಹತ್ವವನ್ನು ಪಡೆದುಕೊಂಡಿದೆ. ಕಳೆದ ವರ್ಷದ ಮೇ 29ರಿಂದ ಜೂ.2ರವರೆಗೆ ಬಿಜೆಪಿ ಆಡಳಿತದ ಮಣಿಪುರಕ್ಕೆ ಶಾ ಭೇಟಿ ನೀಡಿದ್ದರು.
ಶಾ ಅವರ ಉದ್ದೇಶಿತ ಭೇಟಿಯನ್ನು ಮುಚ್ಚಿಡಲಾಗಿದೆಯಾದರೂ ಮಣಿಪುರ ಆಡಳಿUnion Home Minister Amit Shah likely to visit Manipur ahead of polling
ತದಲ್ಲಿನ ಉನ್ನತ ಮೂಲಗಳು ‘ಕೇಂದ್ರ ಗೃಹಸಚಿವರು ಶೀಘ್ರವೇ ರಾಜ್ಯಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ ಮತ್ತು ಅದಕ್ಕಾಗಿ ಈಗಾಗಲೇ ಸಿದ್ಧತೆಗಳು ನಡೆಯುತ್ತಿವೆ ’ ಎಂದು ತಿಳಿಸಿವೆ.
ಶುಕ್ರವಾರ ಮುಖ್ಯಮಂತ್ರಿ ಎನ್.ಬೀರೇನ್ ಸಿಂಗ್ ಅವರೂ ತನ್ನ ಅಧಿಕೃತ ನಿವಾಸದಲ್ಲಿ ಕಾಕ್ಚಿಂಗ್ ಜಿಲ್ಲೆಯಿಂದ ಆಗಮಿಸಿದ್ದ ಭಾರೀ ಸಂಖ್ಯೆಯ ಜನರೊಂದಿಗೆ ತನ್ನ ಸಂವಾದ ಕಾರ್ಯಕ್ರಮದಲ್ಲಿ ಶಾ ಮಣಿಪುರಕ್ಕೆ ಭೇಟಿ ನೀಡಬಹುದು ಎಂದು ತಿಳಿಸಿದ್ದಾರೆ. ಆದರೂ ಅವರು ತನ್ನ ಭಾಷಣದಲ್ಲಿ ಭೇಟಿಯ ನಿರ್ದಿಷ್ಟತೆಗಳನ್ನು ಹಂಚಿಕೊಂಡಿಲ್ಲ.
ಮಣಿಪುರದಲ್ಲಿ ಎ.19 ಮತ್ತು ಎ.26,ಹೀಗೆ ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಇನ್ನರ್ ಮಣಿಪುರ ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವ ಬಿಜೆಪಿ,ಪ್ರಮುಖವಾಗಿ ಕುಕಿ ಮತ್ತು ನಾಗಾ ಪ್ರಾಬಲ್ಯದ ಜಿಲ್ಲೆಗಳನ್ನು ಒಳಗೊಂಡಿರುವ ಔಟರ್ ಮಣಿಪುರ ಕ್ಷೇತ್ರ(ಎಸ್ಟಿ)ದಲ್ಲಿ ನಾಗಾ ಪೀಪಲ್ಸ್ ಫ್ರಂಟ್ನ ಅಭ್ಯರ್ಥಿಯನ್ನು ಬೆಂಬಲಿಸಿದೆ.
ಕುಕಿ ಉಗ್ರಗಾಮಿ ಗುಂಪುಗಳೊಂದಿಗೆ ಮಾಡಿಕೊಳ್ಳಲಾಗಿರುವ ‘ಕಾರ್ಯಾಚರಣೆಗಳ ಅಮಾನತು (ಎಸ್ಒಒ)’ ಒಪ್ಪಂದದ ಭವಿಷ್ಯದ ಕುರಿತು ಕುತೂಹಲ ಉಳಿದುಕೊಂಡಿರುವ ಸಂದರ್ಭದಲ್ಲೇ ಶಾ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಮಣಿಪುರ ಸರಕಾರವು ಮಾರ್ಚ್ 2023ರಲ್ಲಿ ಒಪ್ಪಂದದಿಂದ ಏಕಪಕ್ಷೀಯವಾಗಿ ಹಿಂದೆ ಸರಿದಿದೆಯಾದರೂ ಕೇಂದ್ರ ಸರಕಾರದ ನಿಲುವು ಅಸ್ಪಷ್ಟವಾಗಿದೆ.
ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಈ ವಿಷಯದಲ್ಲಿ ಶಾ ಕೇಂದ್ರದ ನಿಲುವನ್ನು ಸ್ಪಷ್ಟಪಡಿಸುತ್ತಾರೆಯೇ ಎನ್ನುವುದು ತಕ್ಷಣಕ್ಕೆ ಗೊತ್ತಾಗಿಲ್ಲ ಎಂದು ಮಣಿಪುರ ಸರಕಾರದ ಅಧಿಕಾರಿಯೋರ್ವರು ತಿಳಿಸಿದ್ದಾರೆ.
ಚುನಾವಣೆಗಳು ಘೋಷಣೆಯಾದಾಗಿನಿಂದ ಎರಡೂ ಕಡೆಗಳಲ್ಲಿ ಬಂದೂಕುಗಳು ಮೌನವಾಗಿವೆ. ಹಗೆತನವು ವಿರಾಮ ಪಡೆದುಕೊಂಡಿದೆ. ಶಾ ಅವರ ಭೇಟಿಯು ವಿಶ್ವಾಸ ನಿರ್ಮಾಣ ಕ್ರಮವಾಗಿಯೂ ಕಾರ್ಯ ನಿರ್ವಹಿಸಲಿದೆ ಎಂದು ಅಧಿಕಾರಿ ಸುದ್ದಿಸಂಸ್ಥೆಗೆ ತಿಳಿಸಿದರು.
ಜನಾಂಗೀಯ ಹಿಂಸಾಚಾರದಿಂದ ತತ್ತರಿಸುತ್ತಿರುವ ಮಣಿಪುರಕ್ಕೆ ಒಮ್ಮೆ ಭೇಟಿ ನೀಡಿದ್ದ ಶಾ ಈಗ ಇನ್ನೊಮ್ಮೆ ಭೇಟಿ ನೀಡುವ ಸಾಧ್ಯತೆಯಿದ್ದರೆ ಪ್ರಧಾನಿ ನರೇಂದ್ರ ಮೋದಿ ಅವರು ಈ ಅವಧಿಯಲ್ಲಿ ಒಮ್ಮೆಯೂ ರಾಜ್ಯಕ್ಕೆ ಭೇಟಿ ನೀಡಿಲ್ಲ. ಇದನ್ನು ಪದೇ ಪದೇ ಟೀಕಿಸಿರುವ ವಿರೋಧ ಪಕ್ಷಗಳು ಮಣಿಪುರ ಸಂಘರ್ಷದ ಬಗ್ಗೆ ಕೇಂದ್ರದ ಉದಾಸೀನತೆಗೆ ಇದೂ ಕಾರಣವಾಗಿದೆ ಎಂದು ಹೇಳಿವೆ.