ವೈದ್ಯೆಯ ಹತ್ಯೆ ವಿರೋಧಿಸಿ ರಾಷ್ಟ್ರಾದ್ಯಂತ ಪ್ರತಿಭಟನೆ: ಪ್ರತಿ ಎರಡು ಗಂಟೆಗೊಮ್ಮೆ ವರದಿ ರವಾನಿಸುವಂತೆ ರಾಜ್ಯಗಳಿಗೆ ಕೇಂದ್ರ ಸೂಚನೆ
ವೈದ್ಯರ ಪ್ರತಿಭಟನೆ (Photo: PTI)
ಹೊಸದಿಲ್ಲಿ: ಕೋಲ್ಕತ್ತಾ ಆಸ್ಪತ್ರೆಯೊಂದರಲ್ಲಿ ಕರ್ತವ್ಯ ನಿರತ ವೈದ್ಯೆಯೊಬ್ಬರ ಮೇಲೆ ನಡೆದ ಅತ್ಯಾಚಾರ ಮತ್ತು ಹತ್ಯೆಯನ್ನು ಪ್ರತಿಭಟಿಸಿ ರಾಷ್ಟ್ರಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳಿಗೆ ಸಂಬಂಧಿಸಿದಂತೆ, ಕಾನೂನು ಮತ್ತು ಸುವ್ಯವಸ್ಥೆ ಕುರಿತು ಪ್ರತಿ ಎರಡು ಗಂಟೆಗೊಮ್ಮೆ ವರದಿ ರವಾನಿಸುವಂತೆ ಕೇಂದ್ರ ಸರಕಾರ ಎಲ್ಲ ರಾಜ್ಯಗಳಿಗೆ ಸೂಚಿಸಿದೆ.
ಅಧಿಸೂಚನೆಯ ಪ್ರಕಾರ, ಪ್ರತಿ ಎರಡು ಗಂಟೆಗೊಮ್ಮೆ ಇ-ಮೇಲ್, ಫ್ಯಾಕ್ಸ್ ಅಥವಾ ವಾಟ್ಸ್ ಆ್ಯಪ್ ಮೂಲಕವೂ ಸಂಬಂಧಿತ ರಾಜ್ಯಗಳಲ್ಲಿನ ಕಾನೂನು ಮತ್ತು ಸುವ್ಯವಸ್ಥೆ ಕುರಿತು ವರದಿ ರವಾನಿಸುವಂತೆ ಎಲ್ಲ ರಾಜ್ಯಗಳ ಪೊಲೀಸ್ ಪಡೆಗಳಿಗೆ ಕೇಂದ್ರ ಗೃಹ ಸಚಿವಾಲಯ ನಿರ್ದೇಶನ ನೀಡಿದೆ.
“ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿನ ಆರ್ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ತರಬೇತಿನಿರತ ವೈದ್ಯೆಯ ಹತ್ಯೆಯನ್ನು ಪ್ರತಿಭಟಿಸಿ ನಡೆಯುತ್ತಿರುವ ಪ್ರತಿಭಟನೆಗಳಿಗೆ ಸಂಬಂಧಿಸಿದಂತೆ ಸಂಬಂಧಿತ ಪ್ರಾಧಿಕಾರಗಳು ತಮ್ಮ ತಮ್ಮ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿನ ಕಾನೂನು ಮತ್ತು ಸುವ್ಯವಸ್ಥೆ ವರದಿಗಳ ಮೇಲುಸ್ತುವಾರಿ ವಹಿಸಬೇಕು. ಎರಡು ಗಂಟೆಗೊಮ್ಮೆ ಕಾನೂನು ಮತ್ತು ಸುವ್ಯವಸ್ಥೆ ಕುರಿತು ವರದಿಯನ್ನು ರವಾನಿಸಬೇಕು. ಆಗಸ್ಟ್ 16, 2024ರ ಸಂಜೆ 4 ಗಂಟೆಯಿಂದ ಇನ್ನು ಮುಂದೆ ನಿರಂತರವಾಗಿ ಎರಡು ಗಂಟೆಗೊಮ್ಮೆ ಕಾನೂನು ಮತ್ತು ಸುವ್ಯವಸ್ಥೆ ವರದಿಯನ್ನು ಫ್ಯಾಕ್ಸ್ ಅಥವಾ ಇಮೇಲ್ ಅಥವಾ ವಾಟ್ಸ್ ಆ್ಯಪ್ ಮೂಲಕ ಗೃಹ ಸಚಿವಾಲಯದ ನಿಯಂತ್ರಣ ಕೊಠಡಿಗೆ ಕಳಿಸಿಕೊಡಲು ಕೋರಲಾಗಿದೆ” ಎಂದು ಕೇಂದ್ರ ಗೃಹ ಸಚಿವಾಲಯದ ಅಧಿಸೂಚನೆಯಲ್ಲಿ ನಿರ್ದೇಶನ ನೀಡಲಾಗಿದೆ.
ರಾಜ್ಯ ಸರಕಾರಗಳು ಆಗಸ್ಟ್ 16ರಿಂದಲೇ ಪ್ರತಿ ಎರಡು ಗಂಟೆಗೊಮ್ಮೆ ಕಾನೂನು ಮತ್ತು ಸುವ್ಯವಸ್ಥೆ ವರದಿಯನ್ನು ಕೇಂದ್ರ ಗೃಹ ಸಚಿವಾಲಯಕ್ಕೆ ರವಾನಿಸುತ್ತಿವೆ ಎಂದು ತಿಳಿದು ಬಂದಿದೆ ಎಂದು NDTV ಸುದ್ದಿ ಸಂಸ್ಥೆ ವರದಿ ಮಾಡಿದೆ.
“ಇದರಿಂದ ಮಹತ್ವದ ವಿಷಯಗಳ ಕುರಿತ ವರದಿಗಳು ಸೂಕ್ತ ಸಮಯದೊಳಗೆ ತಲುಪುವುದು ಖಾತ್ರಿಗೊಳ್ಳಲಿದೆ” ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆಗಸ್ಟ್ 9ರಂದು ಕೋಲ್ಕತ್ತಾದ ಸರಕಾರಿ ಆಸ್ಪತ್ರೆಯಾದ ಆರ್ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸೆಮಿನಾರ್ ಹಾಲಿನಲ್ಲಿ 31 ವರ್ಷದ ತರಬೇತಿ ನಿರತ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರ ಮೇಲೆ ಅತ್ಯಾಚಾರವೆಸಗಿ, ಕ್ರೂರವಾಗಿ ಹತ್ಯೆಗೈಯ್ಯಲಾಗಿತ್ತು. ಈ ಕೃತ್ಯವನ್ನು ಪ್ರತಿಭಟಿಸಿ ಶನಿವಾರ ಬೆಳಗ್ಗೆ 9ರಿಂದ ರವಿವಾರದವರೆಗೆ 24 ಗಂಟೆಗಳ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಭಾರತೀಯ ವೈದ್ಯಕೀಯ ಒಕ್ಕೂಟವು ಕರೆ ನೀಡಿದೆ.