ಎಐ ಸವಾಲು ಎದುರಿಸಲು ಭಾರತವು ಸಜ್ಜಾಗುತ್ತಿದೆ: ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
10,370 ಕೋಟಿ ರೂ.ವೆಚ್ಚದ IndiaAI ಮಿಷನ್ ಭಾಗವಾಗಿ ಎಲ್ಎಲ್ಎಂ ನಿರ್ಮಿಸಲು ನಿರ್ಧಾರ

ಅಶ್ವಿನಿ ವೈಷ್ಣವ್ | PTI
ಹೊಸದಿಲ್ಲಿ: ಚೀನಾದ ಕೃತಕ ಬುದ್ಧಿಮತ್ತೆ(AI) ಪ್ರಯೋಗಾಲಯವೊಂದು ಕಡಿಮೆ ವೆಚ್ಚದ ಮೂಲಭೂತ ಮಾದರಿ ʼಡೀಪ್ಸೀಕ್ʼ ಅನ್ನು ಬಿಡುಗಡೆಗೊಳಿಸಿರುವ ಹಿನ್ನೆಲೆಯಲ್ಲಿ ಭಾರತ ಸರಕಾರವು 10,370 ಕೋಟಿ ರೂ.ವೆಚ್ಚದ IndiaAI ಮಿಷನ್ ಭಾಗವಾಗಿ ಚಾಟ್ಜಿಪಿಟಿ ಮತ್ತು ಡೀಪ್ಸೀಕ್ ಅನ್ನು ಎದುರಿಸಲು ತನ್ನದೇ ಆದ ದೇಶಿಯ ಲಾರ್ಜ್ ಲ್ಯಾಂಗ್ವೇಜ್ ಮಾಡೆಲ್(ಎಲ್ಎಲ್ಎಂ)ನ್ನು ನಿರ್ಮಿಸಲು ನಿರ್ಧರಿಸಿದೆ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ಗುರುವಾರ ಇಲ್ಲಿ ತಿಳಿಸಿದರು.
18,693 ಗ್ರಾಫಿಕ್ಸ್ ಪ್ರೊಸೆಸಿಂಗ್ ಯೂನಿಟ್ ಅಥವಾ ಜಿಪಿಯುಗಳನ್ನು ಪೂರೈಸಲು 10 ಕಂಪನಿಗಳನ್ನೂ ಸರಕಾರವು ಆಯ್ಕೆ ಮಾಡಿದೆ. ಇವು ಮೂಲಭೂತ ಮಾದರಿಯನ್ನು ನಿರ್ಮಿಸುವ ಮಷಿನ್ ಲರ್ನಿಂಗ್ ಸಾಧನಗಳನ್ನು ಅಭಿವೃದ್ಧಿಗೊಳಿಸಲು ಅಗತ್ಯವಾಗಿರುವ ಉನ್ನತ ಮಟ್ಟದ ಚಿಪ್ಗಳಾಗಿವೆ. ಒಟ್ಟು ಜಿಪಿಯುಗಳ ಸುಮಾರು ಅರ್ಧದಷ್ಟು ಹಿರಾನಂದಾನಿ ಗ್ರೂಪ್ ಬೆಂಬಲಿತ ಯೊಟ್ಟಾ ಕಂಪನಿಯೊಂದರಿಂದಲೇ ಬರಲಿದ್ದು,ಅದು 9,216 ಯೂನಿಟ್ಗಳನ್ನು ಒದಗಿಸಲು ಬದ್ಧವಾಗಿದೆ.
‘ಕಳೆದ ಒಂದೂವರೆ ವರ್ಷಗಳಿಂದ ನಮ್ಮ ತಂಡಗಳು ಸ್ಟಾರ್ಟ್ಅಪ್ಗಳು, ಸಂಶೋಧಕರು, ಪ್ರಾಧ್ಯಾಪಕರು ಮತ್ತಿತರರೊಂದಿಗೆ ಕೆಲಸ ಮಾಡುತ್ತಿವೆ. ಇಂದು ನಾವು ನಮ್ಮದೇ ಆದ ಮೂಲಭೂತ ಮಾದರಿಯನ್ನು ಅಭಿವೃದ್ಧಿಗೊಳಿಸಲು ಪ್ರಸ್ತಾವಗಳಿಗಾಗಿ ಆಹ್ವಾನಿಸುತ್ತಿದ್ದೇವೆ. ಈ ಮಾದರಿಯು ಭಾರತೀಯ ಸಂದರ್ಭ,ಭಾಷೆಗಳು,ಸಂಸ್ಕೃತಿಯನ್ನು ಗಮನದಲ್ಲಿಟ್ಟುಕೊಳ್ಳುತ್ತದೆ ಮತ್ತು ಪಕ್ಷಪಾತದಿಂದ ದೂರವಿರುತ್ತದೆ ’ ಎಂದ ಹೇಳಿದ ವೈಷ್ಣವ್, ‘ಮೂಲಭೂತ ಮಾದರಿಯ ನಿರ್ಮಾಣಕ್ಕಾಗಿ ಸರಕಾರವು ಕನಿಷ್ಠ ಆರು ಕಂಪನಿಗಳೊಂದಿಗೆ ಸಂಪರ್ಕದಲ್ಲಿದೆ,ಇದು ನಾಲ್ಕರಿಂದ ಎಂಟು ತಿಂಗಳು ಸಮಯವನ್ನು ತೆಗೆದುಕೊಳ್ಳಬಹುದು. ಮುಂದಿನ ಕೆಲವು ತಿಂಗಳುಗಳಲ್ಲಿ ನಾವು ವಿಶ್ವದರ್ಜೆಯ ಮೂಲಭೂತ ಮಾದರಿಯನ್ನು ಹೊಂದಲಿದ್ದೇವೆ ’ಎಂದರು.
ಮಾದರಿಯ ನಿರ್ಮಾಣ ವೆಚ್ಚ ಮತ್ತು ಸರಕಾರವು ಪ್ರಸ್ತುತ ಸಂಪರ್ಕದಲ್ಲಿರುವ ಕಂಪನಿಗಳ ಬಗ್ಗೆ ವಿವರಗಳನ್ನು ಅವರು ನೀಡಲಿಲ್ಲ.
18,693 ಜಿಪಿಯುಗಳ ಪೈಕಿ ಸುಮಾರು 10,000 ಜಿಪಿಯುಗಳು ಇಂದು ಸ್ಥಾಪನೆಗೆ ಸಜ್ಜಾಗಿವೆ ಎಂದು ಹೇಳಿದ ವೈಷ್ಣವ,ಸರಕಾರವು ಮುಂದಿನ ಕೆಲವು ದಿನಗಳಲ್ಲಿ ಸಾಮಾನ್ಯ ಕಂಪ್ಯೂಟ್ ಫೆಸಿಲಿಟಿಯನ್ನು ಆರಂಭಿಸಲಿದ್ದು, ಇದರಿಂದ ಸ್ಟಾರ್ಟ್ಅಪ್ಗಳು ಮತ್ತು ಸಂಶೋಧಕರು ಕಂಪ್ಯೂಟಿಂಗ್ ಪವರ್ಗೆ ಪ್ರವೇಶ ಪಡೆದುಕೊಳ್ಳಬಹುದು. ಹೈಯರ್ ಎಂಡ್ ಜಿಪಿಯುಗಳ ಬಳಕೆಗೆ ಪ್ರತಿ ಗಂಟೆಗೆ 150 ರೂ. ಮತ್ತು ಲೋವರ್ ಎಂಡ್ ಜಿಪಿಯು ಬಳಕೆಗೆ ಪ್ರತಿ ಗಂಟೆಗೆ 115.85 ರೂ.ವೆಚ್ಚವಾಗಲಿದೆ. ಈ ಸೇವೆಗಳಗೆ ಪ್ರವೇಶವನ್ನು ಇನ್ನಷ್ಟು ಸುಲಭಗೊಳಿಸಲು ಸರಕಾರವು ಅಂತಿಮ ಬಳಕೆದಾರರಿಗೆ ಒಟ್ಟು ವೆಚ್ಚದ ಶೇ.40ರಷ್ಟನ್ನು ಸಬ್ಸಿಡಿ ರೂಪದಲ್ಲಿ ಒದಗಿಸಲಿದೆ. ಜಾಗತಿಕವಾಗಿ ಜಿಪಿಯು ಬಳಕೆಗೆ ಪ್ರತಿ ಗಂಟೆಗೆ 2.5-3 ಡಾಲರ್ ವೆಚ್ಚವಾಗುತ್ತದೆ. ನಾವು ಸಬ್ಸಿಡಿಯ ಬಳಿಕ ಅದನ್ನು ಪ್ರತಿ ಗಂಟೆಗೆ ಒಂದು ಡಾಲರ್ ದರದಲ್ಲಿ ಲಭ್ಯವಾಗಿಸಲಿದ್ದೇವೆ ’ ಎಂದರು.
IಟಿಜiಚಿಂI ಮಿಷನ್ ಅಡಿಯಲ್ಲಿ ಸರಕಾರವು ಮೊದಲ ಸುತ್ತಿನ ಹಣಕಾಸು ನೆರವಿಗಾಗಿ 18 ಅಪ್ಲಿಕೇಷನ್ ಮಟ್ಟದ ಎಐ ಸೊಲ್ಯುಷನ್ಗಳನ್ನು ಆಯ್ಕೆ ಮಾಡಿದ್ದು,ಇವು ಕೃಷಿ,ಕಲಿಕಾ ಅಸಾಮರ್ಥ್ಯಗಳು ಮತ್ತು ಹವಾಮಾನ ಬದಲಾವಣೆ ಕೇತ್ರಗಳನ್ನು ಕೇಂದ್ರೀಕರಿಸಲಿವೆ ಎಂದು ವೈಷ್ಣವ ತಿಳಿಸಿದರು.