ತ್ರಿಭಾಷಾ ನೀತಿ ಇಡೀ ದೇಶಕ್ಕೆ ಒಳ್ಳೆಯದು:ಕೇಂದ್ರ ಸಚಿವ ಕಿರಣ ರಿಜಿಜು

ಕಿರಣ ರಿಜಿಜು | PC: PTI
ತಿರುವನಂತಪುರ: ನೂತನ ಶಿಕ್ಷಣ ನೀತಿ(ಎನ್ಇಪಿ)ಯ ತ್ರಿಭಾಷಾ ಸೂತ್ರವು ಇಡೀ ದೇಶಕ್ಕೆ ಒಳ್ಳೆಯದು ಎಂದು ಕೇಂದ್ರ ಸಚಿವ ಕಿರಣ ರಿಜಿಜು ಅವರು ಗುರುವಾರ ಇಲ್ಲಿ ಹೇಳಿದರು.
ಎನ್ಇಪಿಯಲ್ಲಿನ ತ್ರಿಭಾಷಾ ಸೂತ್ರದ ಕುರಿತು,ವಿಶೇಷವಾಗಿ ದಕ್ಷಿಣದ ರಾಜ್ಯಗಳಲ್ಲಿ ನಡೆಯುತ್ತಿರುವ ಗಂಭೀರ ಚರ್ಚೆ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು,ಈ ವಿಷಯದಲ್ಲಿ ಕೆಲವು ತಪ್ಪು ಮಾಹಿತಿಗಳಿವೆ ಅಥವಾ ಕೆಲವರು ಉದ್ದೇಶಪೂರ್ವಕವಾಗಿ ರಾಜಕೀಯ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದರು.
ದಕ್ಷಿಣದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗಾಗಿ ಪ್ರಧಾನ ಮಂತ್ರಿ ಜನ ವಿಕಾಸ ಕಾರ್ಯಕ್ರಮ ಕುರಿತು ಪ್ರಾದೇಶಿಕ ಪುನರ್ಪರಿಶೀಲನಾ ಸಭೆ ಮತ್ತು ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲು ಇಲ್ಲಿಗೆ ಭೇಟಿ ನೀಡಿದ್ದ ರಿಜಿಜು,‘ಇಂದು ನರೇಂದ್ರ ಮೋದಿಯವರು ಭಾರತದ ಪ್ರಧಾನಿಯಾಗಿದ್ದಾರೆ,ಆದರೆ ಅವರ ಮಾತೃಭಾಷೆ ಗುಜರಾತಿ. ನಮ್ಮ ಗೃಹಸಚಿವ ಅಮಿತ್ ಶಾ ಅವರ ಮಾತೃಭಾಷೆ ಗುಜರಾತಿ. ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಅವರ ಮಾತೃಭಾಷೆ ಒಡಿಯಾ ಮತ್ತು ನನ್ನ ಮಾತೃಭಾಷೆ ಅರುಣಾಚಲಿ. ಆದರೆ ನಾವೆಲ್ಲರೂ ನಮ್ಮ ದೇಶದ ಹಿತಾಸಕ್ತಿಯನ್ನು ಮುಖ್ಯವಾಗಿಟ್ಟುಕೊಂಡು ಒಂದು ತಂಡವಾಗಿ ಕೆಲಸ ಮಾಡುತ್ತಿದ್ದೇವೆ ’ಎಂದು ಹೇಳಿದರು.
‘ಜಾತಿ,ಜನಾಂಗ,ಸಮುದಾಯ,ಧರ್ಮ ಅಥವಾ ಭಾಷೆ ಅಥವಾ ಪ್ರದೇಶದ ಆಧಾರದಲ್ಲಿ ದೇಶವನ್ನು ವಿಭಜಿಸದಿರೋಣ. ನಾವೆಲ್ಲರೂ ಭಾರತೀಯರು,ನಾವು ಒಂದಾಗಿ ಕೆಲಸ ಮಾಡೋಣ. ದೇಶದಲ್ಲಿಯ ಪ್ರತಿಯೊಂದು ಪ್ರದೇಶ,ಪ್ರತಿಯೊಂದು ಸಮುದಾಯ ಮತ್ತು ಪ್ರತಿಯೊಬ್ಬರನ್ನು ಸಮಾನವಾಗಿ ನಡೆಸಿಕೊಳ್ಳಲಾಗುವುದು ’ ಎಂದು ಪ್ರಧಾನಿ ನಿರಂತರವಾಗಿ ಹೇಳುತ್ತಿದ್ದಾರೆ ಎಂದರು.