ಕ್ಷತ್ರಿಯರ ಬಗ್ಗೆ ನಿಂದನಾತ್ಮಕ ಮಾತುಗಳನ್ನಾಡಿ ವಿವಾದಕ್ಕೊಳಗಾದ ಬಳಿಕ ಕ್ಷಮೆಯಾಚಿಸಿದ ಕೇಂದ್ರ ಸಚಿವ ರುಪಾಲ
ಪರಶೋತ್ತಮ್ ರುಪಾಲ (Photo: gujaratsamachar.com)
ಹೊಸದಿಲ್ಲಿ: ಹಿಂದಿನ ಮಹಾರಾಜರು (ಕ್ಷತ್ರಿಯ ಅರಸರು) ಬ್ರಿಟಿಷರಂತಹ ವಿದೇಶಿ ಆಳ್ವಿಕರಿಗೆ ಶರಣಾಗಿ ಅವರೊಂದಿಗೆ ಕೌಟುಂಬಿಕ ಸಂಬಂಧ ಬೆಳಸಿದ್ದರು, ರಾಜ ಮನೆತನಗಳು ಬ್ರಿಟಿಷ್ ಆಳ್ವಿಕೆದಾರರೊಂದಿಗೆ ಉತ್ತಮ ಸಂಬಂಧ ಬೆಳೆಸಿ ತಮ್ಮ ಪುತ್ರಿಯರನ್ನು ಅವರಿಗೆ ವಿವಾಹ ಮಾಡಿಕೊಟ್ಟಿದ್ದರು. ಆದರೆ ದಲಿತ ಸಮುದಾಯ ಬ್ರಿಟಿಷ್ ಆಡಳಿತದೆದುರು ತಲೆತಗ್ಗಿಸಿಲ್ಲ,” ಎಂದು ಕೇಂದ್ರ ಸಚಿವ ಹಾಗೂ ರಾಜಕೋಟ್ನ ಬಿಜೆಪಿ ಅಭ್ಯರ್ಥಿ ಪರಶೋತ್ತಮ್ ರುಪಾಲ ಹೇಳಿರುವುದು ಕ್ಷತ್ರಿಯ ಸಮುದಾಯದ ಭಾರೀ ಆಕ್ರೋಶಕ್ಕೆ ಗುರಿಯಾಗಿದೆ.
ಮಾರ್ಚ್ 22ರಂದು ಚುನಾವಣಾ ಪ್ರಚಾರ ಸಭೆಯಲ್ಲಿ ಕೇಂದ್ರ ಸಚಿವರ ಈ ಹೇಳಿಕೆ ಬಂದಿತ್ತು. ಅವರ ಈ ಭಾಷಣದ ವೀಡಿಯೋ ವೈರಲ್ ಆದಂತೆ ಕ್ಷತ್ರಿಯರ ಮತ್ತು ರಜಪೂತರ ಕೆಂಗಣ್ಣಿಗೆ ಗುರಿಯಾಗಿತ್ತು.
ಸಚಿವರು ನಂತರ ಕ್ಷಮೆಯಾಚಿಸಿದರೂ ಕರ್ಣಿ ಸೇನಾ ಸಹಿತ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿ ಅವರ ಪ್ರತಿಕೃತಿ ದಹಿಸಿ ಅವರನ್ನು ಅಭ್ಯರ್ಥಿಗಳ ಪಟ್ಟಿಯಿಂದ ಕೈಬಿಡುವ ತನಕ ಪ್ರತಿಭಟನೆ ನಡೆಸುವುದಾಗಿ ಬೆದರಿಕೆ ಹಾಕಿದ್ದವು.
ಈ ವಿವಾದದ ನಡುವೆ ಸಮುದಾಯದ ಸದಸ್ಯರ ವಿಶೇಷ ಸಭೆಯನ್ನು ಗೊಂಡಾಲದ ಶೆಮ್ಲಾ ಗ್ರಾಮದಲ್ಲಿ ಕ್ಷತ್ರಿಯ ಮುಖಂಡ ಹಾಗೂ ಮಾಜಿ ಬಿಜೆಪಿ ಶಾಸಕ ಜೈರಾಜ್ ಸಿಂಗ್ ಜಡೇಜಾ ಆಯೋಜಿಸಿದ್ದರು. ಈ ಸಭೆಯಲ್ಲಿ ರುಪಾಲಾ ಮತ್ತೊಮ್ಮೆ ಕೈಜೋಡಿಸಿ ಎಲ್ಲರಿಂದಲೂ ಕ್ಷಮೆ ಕೋರಿದರಲ್ಲದೆ ಯಾರದ್ದೇ ಭಾವನೆಗಳಿಗೆ ನೋವುಂಟು ಮಾಡುವ ಉದ್ದೇಶ ತಮಗಿಲ್ಲ ಎಂದರು.
“ಜೀವಮಾನದಲ್ಲಿ ನನ್ನ ಹೇಳಿಕೆಯನ್ನು ನಾನು ವಾಪಸ್ ಪಡೆದಿಲ್ಲ. ಆದರೆ ನನ್ನ ಹೇಳಿಕೆಗಳಿಂದಾಗಿ ಪಕ್ಷವನ್ನು ಟೀಕಿಸಲಾಗುತ್ತಿದೆ. ಪಕ್ಷಕ್ಕಾಗಿ ನನ್ನ ಹೇಳಿಕೆಗಳನ್ನು ವಾಪಸ್ ಪಡೆಯುತ್ತೇನೆ ಹಾಗೂ ಇಡೀ ಸಮುದಾಯದಿಂದ ಕ್ಷಮೆಯಾಚಿಸುತ್ತೇನೆ,” ಎಂದು ಅವರು ಹೇಳಿದರು.
Union Minister Parshottam Rupala while praising Dalits for not bowing down to British can be heard saying that while the British spared no efforts to persecute the Indians, “Even the kings bowed down. They broke bread with them and married their daughters to them”. (March 22). pic.twitter.com/OitdxeY6OG
— Mohammed Zubair (@zoo_bear) March 30, 2024