ಇನ್ನೊಂದು ವಾರದಲ್ಲಿ ಪೌರತ್ವ ಕಾಯ್ದೆ ಜಾರಿಯಾಗಲಿದೆ ಎಂದ ಕೇಂದ್ರ ಸಚಿವ
ಕೇಂದ್ರ ಸಚಿವ ಶಂತನು ಠಾಕೂರ್ (PTI)
ಕೋಲ್ಕತ್ತಾ: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಇನ್ನು ಒಂದು ವಾರದೊಳಗೆ ದೇಶಾದ್ಯಂತ ಜಾರಿಗೊಳಿಸಲಾಗುವುದು ಎಂದು ಸೋಮವಾರ ಕೇಂದ್ರ ಸಚಿವ ಶಂತನು ಠಾಕೂರ್ ಹೇಳಿದ್ದಾರೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಸುದ್ದಿ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಬೊಂಗಾಂವ್ ಕ್ಷೇತ್ರದ ಸಂಸದರೂ ಆಗಿರುವ ಶಂತನು ಠಾಕೂರ್, ವಿವಾದಾತ್ಮಕ ಕಾಯ್ದೆಯನ್ನು ಇನ್ನು ಏಳು ದಿನಗಳೊಳಗಾಗಿ ಶೀಘ್ರದಲ್ಲೇ ಜಾರಿಗೊಳಿಸಲಾಗುವುದು ಎಂದು ಹೇಳಿದ್ದಾರೆ.
2019ರಲ್ಲಿ ಬಿಜೆಪಿಯು ಜಾರಿಗೆ ತಂದಿದ್ದ ಪೌರತ್ವ ತಿದ್ದುಪಡಿ ಕಾಯ್ದೆಯು ಬಾಂಗ್ಲಾದೇಶ, ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನದ ಮುಸ್ಲಿಮೇತರ ವಲಸಿಗರಾದ ಹಿಂದೂ, ಸಿಖ್, ಜೈನ್, ಬೌದ್ಧ, ಪಾರ್ಸಿ ಹಾಗೂ ಕ್ರಿಶ್ಚಿಯನ್ನರಿಗೆ ಭಾರತೀಯ ಪೌರತ್ವವನ್ನು ಒದಗಿಸಲು ಅವಕಾಶ ನೀಡುತ್ತದೆ.
“ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಶೀಘ್ರದಲ್ಲೇ ಜಾರಿಗೊಳಿಸಲಾಗುವುದು. ಅದನ್ನು ಇನ್ನು ವಾರದೊಳಗೆ ಜಾರಿಗೊಳಿಸಲಾಗುವುದು. ಇದು ನನ್ನ ಖಾತರಿ” ಎಂದು ಮತುವಾ ಸಮುದಾಯಕ್ಕೆ ಸೇರಿರುವ ಶಂತನು ಠಾಕೂರ್ ಭರವಸೆ ನೀಡಿದ್ದಾರೆ.
ಶಂತನು ಠಾಕೂರ್ ಹೇಳಿಕೆಯು ವಿಭಜನಾಕಾರಿಯಾಗಿದೆ ಎಂದು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ. “ನಮ್ಮ ಪಕ್ಷದ ವರಿಷ್ಠೆ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪಶ್ಚಿಮ ಬಂಗಾಳದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಲೋಕಸಭಾ ಚುನಾವಣೆಗೂ ಮುನ್ನ ಇಂತಹ ಸುಳ್ಳು ಆಶ್ವಾಯಸನೆಗಳನ್ನು ನೀಡುವ ಮೂಲಕ ಬಿಜೆಪಿ ನಾಯಕರು ರಾಜಕೀಯ ಗಿಮಿಕ್ ಮಾಡುತ್ತಿದ್ದಾರೆ” ಎಂದು ಟಿಎಂಸಿ ಪಕ್ಷದ ವಕ್ತಾರ ಕುನಾಲ್ ಘೋಷ್ ಕಿಡಿ ಕಾರಿದ್ದಾರೆ.