ಜಾಗತಿಕ ತಾಪಮಾನದ ವಿರುದ್ಧ ಹೋರಾಟದಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕು: ಕೇಂದ್ರ ಸಚಿವ ಶೇಖಾವತ್
ಕೇಂದ್ರ ಸಚಿವ ಶೇಖಾವತ್ | PTI
ಕೋಲ್ಕತಾ: ಪ್ರತಿಯೊಬ್ಬ ಮಾನವನು ಈ ಗ್ರಹದ ‘ಮಾಲಿಕ’ನಂತೆ ವರ್ತಿಸದೆ ಅದರ ‘ಪಾಲಕ’ನಂತೆ ನಡೆದುಕೊಳ್ಳಬೇಕು ಎಂದು ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಶನಿವಾರ ಇಲ್ಲಿ ಹೇಳಿದರು.
ಇಲ್ಲಿಯ ಸೈನ್ಸ್ ಸಿಟಿಯಲ್ಲಿ ‘ಆನ್ ದಿ ಎಡ್ಜ್’ ಹೆಸರಿನ ಹವಾಮಾನ ಬದಲಾವಣೆ ಗ್ಯಾಲರಿಯನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ಹವಾಮಾನ ಬದಲಾವಣೆಯು ಇಡೀ ಜಗತ್ತಿಗೆ ದೊಡ್ಡ ಸಮಸ್ಯೆಯಾಗಿ ಮಾರ್ಪಟ್ಟಿದೆ ಮತ್ತು ‘ವಿಸಲ್ಬ್ಲೋವರ್’ ವಿಜ್ಞಾನಿಗಳು ಮಾತ್ರವಲ್ಲ,ಪ್ರತಿಯೊಬ್ಬ ನಾಗರಿಕನೂ ಪಾಲುದಾರನಂತೆ ತನ್ನ ಪಾತ್ರವನ್ನು ನಿರ್ವಹಿಸಬೇಕು ಎಂದು ಹೇಳಿದರು.
ಇಂಗಾಲದ ಹೊರಸೂಸುವಿಕೆ, ಸಮುದ್ರ ಮಟ್ಟದಲ್ಲಿ ಏರಿಕೆ,ಹವಾಮಾನ ವೈಪರೀತ್ಯದಂತಹ ಸಮಸ್ಯೆಗಳು ತನ್ನ ಜೀವಿತಾವಧಿಯಲ್ಲಿ ತನ್ನನ್ನು ಬಾಧಿಸುವುದಿಲ್ಲ ಮತ್ತು ಅವೆಲ್ಲ ಕೇವಲ ವಿಜ್ಞಾನಿಗಳು ಮತ್ತು ಮಾಧ್ಯಮ ವರದಿಗಳು ಎಚ್ಚರಿಕೆ ನೀಡುವ ಶೈಕ್ಷಣಿಕ ವಿಷಯಗಳು ಎಂದು ಭಾವಿಸುವುದನ್ನು ನಿಲ್ಲಿಸಬೇಕಾದ ಸಮಯವು ಬಂದಿದೆ ಎಂದು ಹೇಳಿದ ಶೇಖಾವತ್,‘ ನಾವು ಹೊಣೆಗಾರಿಕೆಯಿಂದ ವರ್ತಿಸಬೇಕಿದೆ. ಹವಾಮಾನ ಬದಲಾವಣೆಯು ಇಡೀ ವಿಶ್ವಕ್ಕೆ ದೊಡ್ಡ ಸಮಸ್ಯೆಯಾಗಿದೆ. 25 ವರ್ಷಗಳ ಹಿಂದೆ ಹಸಿರುಮನೆ ಪರಿಣಾಮ ಮತ್ತು ಜಾಗತಿಕ ತಾಪಮಾನ ಕುರಿತು ಚರ್ಚೆಗಳು ಆರಂಭಗೊಂಡಾಗ ಅದರ ಪರಿಣಾಮ ನಿರ್ದಿಷ್ಟ ಪ್ರದೇಶಗಳಿಗೆ ಸೀಮಿತವಾಗಿರುತ್ತದೆ ಎಂದು ಅನೇಕರು ಭಾವಿಸಿದ್ದಿರಬಹುದು. ಆದರೆ ಆ ಕಲ್ಪನೆ ಸುಳ್ಳಾಗಿದೆ. ಶೀತ ಪ್ರದೇಶಗಳಲ್ಲಿ ವಾಸಿಸುತ್ತಿರುವವರು ಜಾಗತಿಕ ತಾಪಮಾನವು ಉಷ್ಣವಲಯದ ಪ್ರದೇಶಗಳ ಮೇಲೆ ಮಾತ್ರ ಪರಿಣಾಮ ಬೀರುತ್ತದೆ ಎಂದು ಯೋಚಿಸಕೂಡದು. ಅದೇ ರೀತಿ ಒಳನಾಡು ಪ್ರದೇಶಗಳಲ್ಲಿ ವಾಸಿಸುತ್ತಿರುವವರು ಸಮುದ್ರ ಮಟ್ಟದಲ್ಲಿ ಏರಿಕೆಯು ಕಡಲ ತೀರದ ಸಮೀಪದ ನಿವಾಸಿಗಳ ಮೇಲೆ ಪರಿಣಾಮವನ್ನು ಬೀರುತ್ತದೆ ಎಂದು ಭಾವಿಸಕೂಡದು. ಇತ್ತೀಚಿನ ಸಮಯಗಳಲ್ಲಿ ನಾವು ನೋಡಿರುವ ಹವಾಮಾನ ವೈಪರೀತ್ಯಗಳು ಇಡೀ ಸಮುದಾಯವನ್ನು ಹವಾಮಾನ ಬದಲಾವಣೆಯು ಬಾಧಿಸುತ್ತದೆ ಎನ್ನುವುದನ್ನು ಸಾಬೀತುಗೊಳಿಸಿರುವುದರಿಂದ ಇಂತಹ ಚಿಂತನೆಗಳು ನಿಜವಲ್ಲ’ಎಂದರು.
ಪ್ರತಿಯೊಬ್ಬ ಜಾಗ್ರತ ಪ್ರಜೆಯು ಸಾರ್ವಜನಿಕ ವೇದಿಕೆಗಳಲ್ಲಿ,ವೀಡಿಯೊಗಳಲ್ಲಿ,ಪ್ರಕಟಣೆಗಳಲ್ಲಿ ಮತ್ತು ಸಮ್ಮೇಳನಗಳಲ್ಲಿ ತಮ್ಮ ಮುನ್ಸೂಚನೆಗಳು ಮತ್ತು ವಿಶ್ಲೇಷಣೆಯ ಮೂಲಕ ಸಂಭಾವ್ಯ ಸಮಸ್ಯೆಯ ಕುರಿತು ಪದೇ ಪದೇ ಎಚ್ಚರಿಕೆಗಳನ್ನು ನೀಡುತ್ತಿರುವ ವೈಜ್ಞಾನಿಕ ಸಮುದಾಯದ ಸಲಹೆಗೆ ಕಿವಿಗೊಡಬೇಕು. ಪ್ರತಿಯೊಬ್ಬ ಪ್ರಜೆಯು ವಾಯುವಿನಲ್ಲಿ ಇಂಗಾಲವನ್ನು ಹೊರಸೂಸುವ ಮೊಬೈಲ ಫೋನ್ಗಳ ಬಳಕೆಯ ಮೇಲೆ ನಿಯಂತ್ರಣ,ಇಂಗಾಲದ ಹೊರಹೊಮ್ಮುವಿಕೆಯನ್ನು ತಡೆಯಲು ವಿದ್ಯುತ್ ಉಪಕರಣಗಳು ಬಳಕೆಯಲ್ಲಿ ಇಲ್ಲದಾಗ ಅವುಗಳನ್ನು ಸ್ವಿಚ್ ಆಫ್ ಮಾಡುವಂತಹ ಹಲವಾರು ಕ್ರಮಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ಹಸಿರು ಹೊದಿಕೆಯನ್ನು ಹೆಚ್ಚಿಸಿ ಇಂಗಾಲದ ಹೊರಸೂಸುವಿಕೆಯನ್ನು ನಿಯಂತ್ರಿಸಲು ಕೇಂದ್ರವು 80 ಕೋಟಿ ಮರಗಳನ್ನು ಬೆಳೆಸಿದೆ ಎಂದು ತಿಳಿಸಿದ ಅವರು,ಪ್ರತಿಯೊಬ್ಬರೂ ಗಿಡಗಳನ್ನು ನೆಡಬೇಕು ಎಂದು ಕರೆ ನೀಡಿದರು.