ಇಂದಿರಾ ಗಾಂಧಿಯನ್ನು ಭಾರತ ಮಾತೆ ಎಂದು ಕರೆದ ಕೇಂದ್ರ ಸಚಿವ ಸುರೇಶ್ ಗೋಪಿ
ಇಂದಿರಾ ಗಾಂಧಿ, ಸುರೇಶ್ ಗೋಪಿ |PTI
ತ್ರಿಶೂರ್: ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯನ್ನು ಭಾರತ ಮಾತೆ ಎಂದು ಬುಧವಾರ ಬಣ್ಣಿಸಿರುವ ಕೇಂದ್ರ ಸಚಿವ ಸುರೇಶ್ ಗೋಪಿ, ಕಾಂಗ್ರೆಸ್ ಪಕ್ಷದ ದಿವಂಗತ ಮುಖ್ಯಮಂತ್ರಿ ಕೆ.ಕರುಣಾಕರನ್ ಧೈರ್ಯವಂತ ಆಡಳಿತಗಾರರಾಗಿದ್ದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದಲ್ಲದೆ ಕರುಣಾಕರನ್ ಹಾಗೂ ಹಿರಿಯ ಮಾರ್ಕ್ಸ್ ವಾದಿ ಇ.ಕೆ.ನಯನಾರ್ ಅವರನ್ನು ತಮ್ಮ ರಾಜಕೀಯ ಗುರುಗಳು ಎಂದೂ ಬಿಜೆಪಿಯ ನಾಯಕ ಸುರೇಶ್ ಗೋಪಿ ಹೇಳಿದ್ದಾರೆ.
ಪುಂಕುನ್ನಮ್ ನಲ್ಲಿರುವ ಮಾಜಿ ಮುಖ್ಯಮಂತ್ರಿ ಕರುಣಾಕರನ್ ಅವರ ‘ಮುರಳ ಮಂದಿರಂ’ ಸ್ಮಾರಕಕ್ಕೆ ಭೇಟಿ ನೀಡಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಈ ವೇಳೆ, ಕರುಣಾಕರನ್ ನನ್ನ ರಾಜಕೀಯ ಗುರುವಾಗಿದ್ದು, ನನ್ನ ಈ ಭೇಟಿಗೆ ಯಾವುದೇ ರಾಜಕೀಯ ಬಣ್ಣ ಬಳಿಯಬಾರದು ಎಂದು ಮಾಧ್ಯಮ ಮಂದಿಗೆ ಸುರೇಶ್ ಗೋಪಿ ಮನವಿ ಮಾಡಿದರು.
ಆಸಕ್ತಿಕರ ಸಂಗತಿಯೆಂದರೆ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತ್ರಿಶೂರ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕರುಣಾಕರನ್ ಅವರ ಪುತ್ರ ಕೆ.ಮುರಳೀಧರನ್ ಅವರನ್ನು ಪರಾಭವಗೊಳಿಸಿ ಸುರೇಶ್ ಗೋಪಿ ಗೆಲುವು ಸಾಧಿಸಿದ್ದಾರೆ. ಈ ಕ್ಷೇತ್ರವು ತ್ರಿಕೋನ ಹಣಾಹಣಿಗೆ ಸಾಕ್ಷಿಯಾಗಿತ್ತು.