ದ್ವೇಷ ಭಾಷಣಗಳನ್ನು ತಡೆಯಲು 28 ರಾಜ್ಯಗಳು ನೋಡಲ್ ಅಧಿಕಾರಿಗಳನ್ನು ನೇಮಕಗೊಳಿಸಿವೆ: ಸುಪ್ರೀಂ ಕೋರ್ಟ್‌ಗೆ ಕೇಂದ್ರದ ಮಾಹಿತಿ
ಹೊಸದಿಲ್ಲಿ: ನ್ಯಾಯಾಲಯವು ಗುಂಪು ಹಿಂಸಾಚಾರ ಮತ್ತು ಹತ್ಯೆಗಳನ್ನು ತಡೆಯಲು 2018ರಲ್ಲಿ ತೆಹ್ಸೀನ್ ಪೂನಾವಾಲಾ ಪ್ರಕರಣದಲ್ಲಿ ಹೊರಡಿಸಿದ್ದ ಮಾರ್ಗಸೂಚಿಗಳಿಗೆ ಅನುಗುಣವಾಗಿ 28 ರಾಜ್ಯಗಳು ನೋಡಲ್ ಅಧಿಕಾರಿಗಳನ್ನು ನೇಮಕಗೊಳಿಸಿವೆ ಎಂದು ಕೇಂದ್ರ ಸರಕಾರವು ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದೆ.
ದ್ವೇಷ ಭಾಷಣಗಳನ್ನು ತಡೆಯಲು ನಿರ್ದೇಶನಗಳನ್ನು ಕೋರಿ ಸಲ್ಲಿಸಲಾಗಿರುವ ಅರ್ಜಿಗಳಿಗೆ ಉತ್ತರವಾಗಿ ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿರುವ ಸ್ಥಿತಿಗತಿ ವರದಿಯಲ್ಲಿ ಕೇಂದ್ರವು ಈ ಮಾಹಿತಿಯನ್ನು ನೀಡಿದೆ.
ಆ.25ರಂದು ಅರ್ಜಿಗಳ ವಿಚಾರಣೆ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯವು,ನೋಡಲ್ ಅಧಿಕಾರಿಗಳ ನೇಮಕಾತಿಗೆ ಸಂಬಂಧಿಸಿದ ಮಾಹಿತಿಗಳನ್ನು ರಾಜ್ಯಗಳಿಂದ ಸಂಗ್ರಹಿಸುವಂತೆ ಮತ್ತು ಮೂರು ವಾರಗಳಲ್ಲಿ ಸ್ಥಿತಿಗತಿ ವರದಿಯನ್ನು ಸಲ್ಲಿಸುವಂತೆ ಕೇಂದ್ರ ಗೃಹ ಸಚಿವಾಲಯಕ್ಕೆ ಸೂಚಿಸಿತ್ತು. ಯಾವುದೇ ರಾಜ್ಯವು ಸದ್ರಿ ಮಾಹಿತಿಗಳನ್ನು ಒದಗಿಸದಿದ್ದರೆ ಆ ಬಗ್ಗೆ ತನಗೆ ತಿಳಿಸುವಂತೆಯೂ ಅದು ಹೇಳಿತ್ತು.
ಗುಂಪಿನಿಂದ ಥಳಿಸಿ ಹತ್ಯೆಯ ವಿರುದ್ಧ ವಿಶೇಷ ಕಾನೂನೊಂದನ್ನು ರೂಪಿಸುವಂತೆ 2018ರಲ್ಲಿ ಸಂಸತ್ತಿಗೆ ಶಿಫಾರಸು ಮಾಡಿದ್ದ ಸರ್ವೋಚ್ಚ ನ್ಯಾಯಾಲಯವು,ಕಾನೂನಿನ ಭೀತಿ ಮತ್ತು ಕಾನೂನಿನ ಆದೇಶಕ್ಕೆ ಗೌರವ ನಾಗರಿಕ ಸಮಾಜದ ಅಡಿಪಾಯವಾಗಿದೆ ಎಂದು ಒತ್ತಿ ಹೇಳಿತ್ತು. ನ್ಯಾಯಾಲಯವು ಗುಂಪಿನಿಂದ ಥಳಿಸಿ ಹತ್ಯೆಯನ್ನು ತಡೆಯಲು ದೇಶಾದ್ಯಂತ ಪ್ರತಿ ಜಿಲ್ಲೆಯಲ್ಲಿ ನೋಡಲ್ ಅಧಿಕಾರಿಗಳ ನೇಮಕಾತಿಗೆ ಆದೇಶ ಸೇರಿದಂತೆ ಸರಣಿ ನಿರ್ದೇಶನಗಳನ್ನು ಹೊರಡಿಸಿತ್ತು. ಆದಾಗ್ಯೂ ತನ್ನ ನಿರ್ದೇಶನಗಳನ್ನು ಜಾರಿಗೊಳಿಸದಿದ್ದಕ್ಕಾಗಿ ಸರ್ವೋಚ್ಚ ನ್ಯಾಯಾಲಯವು 2019ರಲ್ಲಿ ಕೇಂದ್ರ ಮತ್ತು 10 ರಾಜ್ಯ ಸರಕಾರಗಳನ್ನು ತರಾಟೆಗೆತ್ತಿಕೊಂಡಿತ್ತು.
ಆಗಸ್ಟ್ 2023ರಲ್ಲಿ ದ್ವೇಷ ಭಾಷಣ ಸಮಸ್ಯೆಯನ್ನು ಬಗೆಹರಿಸಲು ಸಂಬಂಧಿಸಿದವರ ಸಹಭಾಗಿತ್ವದ ಮಹತ್ವಕ್ಕೆ ಒತ್ತು ನೀಡಿದ್ದ ನ್ಯಾಯಾಲಯವು, ತನ್ನದೇ ಆದ ಯೋಜನೆಯೊಂದನ್ನು ಪ್ರಸ್ತಾವಿಸಿತ್ತು. ಜಿಲ್ಲಾ ಪೋಲಿಸ್ ವರಿಷ್ಠರ ನೇತೃತ್ವದಲ್ಲಿ ಸಮಿತಿ ರಚಿಸುವಂತೆ ಅದು ಸೂಚಿಸಿತ್ತು. ಈ ಸಮಿತಿಯು ದ್ವೇಷ ಭಾಷಣ ದೂರುಗಳ ಮೌಲ್ಯಮಾಪನ ನಡೆಸಿ ತನಿಖಾಧಿಕಾರಿಗೆ ಅಥವಾ ಸಂಬಂಧಿಸಿದ ಪೋಲಿಸ್ ಠಾಣಾ ಮುಖ್ಯಸ್ಥರಿಗೆ ನಿರ್ದಿಷ್ಟ ನಿರ್ದೇಶನಗಳನ್ನು ನೀಡುತ್ತದೆ.
ಸರ್ವೋಚ್ಚ ನ್ಯಾಯಾಲಯದ ಸಲಹೆಗಳಂತೆ,ಪ್ರಕರಣದ ಬಗ್ಗೆ ಮಾಹಿತಿ ಸ್ವೀಕರಿಸಿದ ಬಳಿಕ ಸಮಿತಿಯು ನಿಗದಿತ ಅವಧಿಯೊಳಗೆ ಸಭೆ ಸೇರಬೇಕಾಗುತ್ತದೆ ಮತ್ತು ಚಾಲ್ತಿಯಲ್ಲಿರುವ ಎಲ್ಲ ಪ್ರಕರಣಗಳ ಪ್ರಗತಿಯನ್ನು ನಿಯಮಿತವಾಗಿ ಪರಿಶೀಲಿಬೇಕು.
ಈ ನಡುವೆ ನ್ಯಾಯಾಲಯವು,2018ರ ತೀರ್ಪಿನಂತೆ ನೇಮಕಗೊಂಡಿರುವ ನೋಡಲ್ ಪೋಲಿಸ್ ಅಧಿಕಾರಿಗಳಿಂದಲೂ ನೆರವನ್ನು ಪಡೆದುಕೊಳ್ಳಲು ಅರ್ಜಿದಾರರಿಗೆ ಅವಕಾಶ ನೀಡಿದೆ.