ಜಗತ್ತಿನ 100 ಕೋಟಿಗೂ ಅಧಿಕ ಮಕ್ಕಳು ಹಿಂಸಾಚಾರಕ್ಕೆ ಬಲಿಪಶುಗಳಾಗುತ್ತಿದ್ದಾರೆ : ವಿಶ್ವಸಂಸ್ಥೆ ವರದಿ
PC : un.org
ಹೊಸದಿಲ್ಲಿ : ಜಗತ್ತಿನಾದ್ಯಂತ 10 ಕೋಟಿಗೂ ಅಧಿಕ ಮಂದಿ ಮಕ್ಕಳು ವಿವಿಧ ರೀತಿಯ ಹಿಂಸಾಚಾರಗಳಿಗೆ ತುತ್ತಾಗುತ್ತಿದ್ದಾರೆಂದು ಆರೋಗ್ಯ ಸಂಸ್ಥೆಯ ವರದಿಯೊಂದು ಬಹಿರಂಗಪಡಿಸಿದೆ. ಕೆಟ್ಟದಾಗಿ ನಡೆಸಿಕೊಳ್ಳುವಿಕೆ, ಬೆದರಿಸುವಿಕೆ, ದೈಹಿಕ ಅಥವಾ ಭಾವಾನಾತ್ಮಕ ಪೀಡನೆ, ಲೈಂಗಿಕ ಕಿರುಕುಳದಂತಹ ಹಿಂಸಾಚಾರಗಳಿಗೆ ಅವರು ತುತ್ತಾಗುತ್ತಿದ್ದಾರೆಂದು ವರದಿ ತಿಳಿಸಿದೆ.
ಜಗತ್ತಿನಾದ್ಯಂತ ಪ್ರತಿ ಹದಿಮೂರು ನಿಮಿಷಗಳಿಗೊಮ್ಮೆ ಒಂದು ಮಗು ಅಥವಾ ಹದಿವಯಸ್ಕ ಕೊಲೆಯಾಗುತ್ತಿದ್ದು ಪ್ರತಿವರ್ಷ ಇಂತಹ ಸುಮಾರು 40 ಸಾವಿರ ತಪ್ಪಿಸಲು ಸಾಧ್ಯವಿರುವಂತಹ ಸಾವುಗಳು ಸಂಭವಿಸುತ್ತವೆ. ದೌರ್ಜನ್ಯಕ್ಕೊಳಗಾದ ಮಕ್ಕಳ ಪೈಕಿ ಅರ್ಧಾಂಶದಷ್ಟು ಮಂದಿ ಮಾತ್ರವೇ ತಮ್ಮ ಹಿಂಸಾಚಾರದ ಅನುಭವವನ್ನು ಹಂಚಿಕೊಳ್ಳುತ್ತಾರೆ ಮತ್ತು ಇವರ ಪೈಕಿ ಕೇವಲ ಶೇ.10ರಷ್ಟು ಮಂದಿಗೆ ಮಾತ್ರವೇ ನೆರವು ದೊರೆಯುತ್ತದೆ ಎಂದರು.
ಜಗತ್ತಿನಾದ್ಯಂತ ಪ್ರತಿ 10 ಮಕ್ಕಳ ಪೈಕಿ 9 ಮಂದಿ ದೈಹಿಕ ದಂಡನೆ ಹಾಗೂ ಲೈಂಗಿಕ ಕಿರುಕುಳದಂತಹ ಬಾಲ್ಯಕಾಲದ ಹಿಂಸಾಚಾರಗಳು ಪ್ರಚಲಿತದಲ್ಲಿರುವ ಮತ್ತು ಅವುಗಳನ್ನು ಕಾನೂನಾತ್ಮಕವಾಗಿ ನಿಷೇಧಿಸದಿರುವ ದೇಶಗಳಲ್ಲಿ ವಾಸವಾಗಿದ್ದಾರೆ. 2ರಿಂದ 17 ವರ್ಷ ವಯಸ್ಸಿನ ಅರ್ಧಾಂಶಕ್ಕಿಂತಲೂ ಅಧಿಕ ಅಂದರೆ ಸುಮಾರು 100 ಕೋಟಿ ಮಕ್ಕಳು ಪ್ರತಿವರ್ಷವೂ ಒಂದಲ್ಲ ಒಂದು ರೀತಿಯ ಹಿಂಸೆಯನ್ನು ಅನುಭವಿಸುತ್ತಿರುತ್ತಾರೆ ಇದರಿಂದಾಗಿ ಹದಿವಯಸ್ಕರಲ್ಲಿ ಆತಂಕ, ಖಿನ್ನತೆ, ಅಸುರಕ್ಷಿತ ಲೈಂಗಿಕಕ್ರಿಯೆ, ಧೂಮಪಾನ, ಮಾದಕದ್ರವ್ಯ ಸೇವನೆಯಂತಹ ದುವರ್ತನೆಗಳು ಕಂಡುಬರುತ್ತವೆ ಅಲ್ಲದೆ ಅವರ ಶೈಕ್ಷಣಿಕ ಸಾಧನೆಯೂ ಕುಸಿತದೆಡೆಗೆ ಸಾಗುತ್ತದೆ ಎಂದು ವರದಿ ಹೇಳಿದೆ.
ಪ್ರತಿ ಐದು ಮಕ್ಕಳ ಪೈಕಿ ಮೂವರು ತಮ್ಮ ಮನೆಗಳಲ್ಲಿ ದೈಹಿಕವಾಗಿ ಶಿಕ್ಷಿಸಲ್ಪಟ್ಟಿದ್ದಾರೆ. ಶೇ.25ರಿಂದ 50 ಶೇಕಡ ಮಕ್ಕಳಿಗೆ ಬೆದರಿಕೆಯ ಅನುಭವವಾಗಿದೆ ಎಂದು ವರದಿ ಹೇಳಿದೆ.
ಹದಿವಯಸ್ಕರಲ್ಲಿ ಬಂದೂಕು ಮತ್ತಿತರ ಶಸ್ತ್ರಾಸ್ತ್ರಗಳ ಬಳಕೆಯೊಂದಿಗೆ ನಡೆದ ಹಿಂಸಾಚಾರವು ಸಾವಿಗೆ ಕಾರಣವಾಗುತ್ತವೆ ಎಂಬ ಬಗ್ಗೆಯೂ ವರದಿ ಗಮನಸೆಳೆದಿದೆ.
ದೈಹಿಕ ದಂಡನೆ ಸೇರಿದಂತೆ ಮಕ್ಕಳ ವಿರುದ್ಧ ಹಿಂಸಾಚಾರವು ಹೆಚ್ಚುತ್ತಿರುವ ಬಗ್ಗೆ ಕಳವಳಗೊಂಡಿರುವ 100ಕ್ಕೂ ಅಧಿಕ ಸರಕಾರಗಳು ಗುರುವಾರ ಕೊಲಂಬಿಯಾದ ಬೊಗೊಟಾದಲ್ಲಿ ನಡೆದ ಮಹತ್ವದ ಅಧಿವೇಶನವೊಂದರಲ್ಲಿ ಐತಿಹಾಸಿಕ ನಿರ್ಣಯವೊಂದನ್ನು ಅಂಗೀಕರಿಸಿದವು. ಈ ಪೈಕಿ 9 ದೇಶಗಳು ವಿಶ್ವದ ಪ್ರತಿ ಐದು ಮಕ್ಕಳ ಪೈಕಿ ಮೂವರು ಮಕ್ಕಳನ್ನು ಬಾಧಿಸುತ್ತಿರುವ ದೈಹಿಕ ದಂಡನೆಯನ್ನು ನಿಷೇಧಿಸುವ ಪ್ರತಿಜ್ಞೆ ಮಾಡಿದವು.
‘‘ ಶಾಲೆಗಳನ್ನು ಸುರಕ್ಷಿತವಾಗಿಸುವ ಹಾಗೂ ಆನ್ಲೈನ್ ಕಿರುಕುಳವನ್ನು ಹತ್ತಿಕ್ಕುವಂತಹ ಕ್ರಮಗಳನ್ನು ಕೈಗೊಳ್ಳುವಿಕೆಯು, ಮಕ್ಕಳನ್ನು ಅಪಾಯ ಹಾಗೂ ಅನಾರೋಗ್ಯದಿಂದ ರಕ್ಷಿಸುವಲ್ಲಿ ಮೂಲಭೂತ ಪಾತ್ರವನ್ನು ವಹಿಸುತ್ತವೆ” ಎಂದು ವಿಶ್ವಸಂಸ್ಥೆಯ ಮಹಾನಿರ್ದೇಶಕ ಡಾ.ಟೆಡ್ರೊಸ್ ಅಧ್ನಾಂ ಗೆಬ್ರಿಯೂಸೆಸ್ ಅಧಿವೇಶನದಲ್ಲಿ ತಿಳಿಸಿದರು.