ರಾಷ್ಟ್ರವನ್ನು ಒಗ್ಗೂಡಿಸುವುದು ನಿಜವಾದ ದೇಶಭಕ್ತಿ: ರಾಹುಲ್ ಗಾಂಧಿ
'ಭಾರತ್ ಜೋಡೋ' ಯಾತ್ರೆಯಲ್ಲಿ ಕಾಂಗ್ರೆಸ್ ನಾಯಕನ ಹೇಳಿಕೆ
Photo : PTI
ವಾರಣಾಸಿ: ರಾಷ್ಟ್ರವನ್ನು ಒಗ್ಗೂಡಿಸುವುದು ನಿಜವಾದ ದೇಶಭಕ್ತಿಯಾಗಿದೆ ಎಂದು ಶನಿವಾರ ಇಲ್ಲಿ ಹೇಳಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು,ಶ್ರೀಮಂತರು ಮತ್ತು ಬಡವರು ‘ವಿಭಿನ್ನ ಭಾರತಗಳಲ್ಲಿ’ ವಾಸಿಸುತ್ತಿದ್ದಾರೆ ಎಂದರು.
ಉತ್ತರ ಪ್ರದೇಶದಲ್ಲಿ ತನ್ನ ’ಭಾರತ ಜೋಡೊ ನ್ಯಾಯ ಯಾತ್ರೆ’ಯ ಎರಡನೇ ದಿನ ರಾಹುಲ್ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಅಜಯ ರಾಯ್ ಮತ್ತು ಪಕ್ಷದ ಇತರ ನಾಯಕರೊಂದಿಗೆ ತೆರೆದ ಜೀಪಿನಲ್ಲಿ ನಿಂತುಕೊಂಡು ನಗರದ ಜನನಿಬಿಡ ಗೊದೌಲಿಯಾ ಪ್ರದೇಶದಲ್ಲಿ ಸಂಚರಿಸಿದರು. ಅವರು ಕಾಶಿ ವಿಶ್ವನಾಥ ದೇವಸ್ಥಾನಕ್ಕೂ ಭೇಟಿ ನೀಡಿದರು.
ಗೊದೌಲಿಯಾ ಚೌಕ್ನಲ್ಲಿ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದ ರಾಹುಲ್, ಭಾರತವು ಪ್ರೀತಿಯ ದೇಶವಾಗಿದೆ, ದ್ವೇಷದ್ದಲ್ಲ. ಸೋದರರ ನಡುವೆ ಸಂಘರ್ಷದಿಂದ ದೇಶವು ದುರ್ಬಲಗೊಳ್ಳುತ್ತದೆ. ದೇಶವನ್ನು ಒಗ್ಗೂಡಿಸುವುದೇ ನಿಜವಾದ ದೇಶಭಕ್ತಿಯಾಗಿದೆ ಎಂದು ಹೇಳಿದರು.
ದೇಶದಲ್ಲಿ ಶ್ರೀಮಂತರಿಗಾಗಿ ಒಂದು ಮತ್ತು ಬಡವರಿಗಾಗಿ ಒಂದು; ಹೀಗೆ ಎರಡು ಭಾರತಗಳಿವೆ ಎಂದ ಅವರು ಮಾಧ್ಯಮಗಳ ವಿರುದ್ಧ ದಾಳಿ ನಡೆಸಿದರು. ದೇಶದ ರೈತರು ಮತ್ತು ಕಾರ್ಮಿಕರ ಸಮಸ್ಯೆಗಳನ್ನು ಮಾಧ್ಯಮಗಳು ತೋರಿಸುತ್ತಿಲ್ಲ. ಮಾಧ್ಯಮಗಳು ಮೋದಿಯವರನ್ನು ದಿನದ 24 ಗಂಟೆಯೂ ತೋರಿಸುತ್ತವೆ, ಐಶ್ವರ್ಯಾ ರೈ ಅವರನ್ನು ತೋರಿಸುತ್ತವೆ. ಆದರೆ ನಿಜವಾದ ಸಮಸ್ಯೆಗಳನ್ನು ತೋರಿಸುವುದಿಲ್ಲ ಎಂದು ಆರೋಪಿಸಿದರು.
ಗುಂಪಿನಿಂದ ರಾಹುಲ್ ಎಂಬ ಯುವಕನನ್ನು ಕರೆದು ಆತ ಶಿಕ್ಷಣಕ್ಕಾಗಿ ಮಾಡಿದ ವೆಚ್ಚ ಮತ್ತು ನಿರುದ್ಯೋಗದ ಕುರಿತು ವಿಚಾರಿಸಿದ ಅವರು, ಹಣದುಬ್ಬರ ಮತ್ತು ನಿರುದ್ಯೋಗ ದೇಶದಲ್ಲಿಯ ಕೇವಲ ಎರಡು ಸಮಸ್ಯೆಗಳಾಗಿವೆ ಎಂದರು.