ಉನ್ನಾವೊ ಅತ್ಯಾಚಾರ ಪ್ರಕರಣ | ಸೆಂಗರ್ನಿಗೆ ಮಧ್ಯಂತರ ಜಾಮೀನು ನೀಡಿದ ದಿಲ್ಲಿ ಹೈಕೋರ್ಟ್
ಕುಲದೀಪ್ ಸಿಂಗ್ | PC : PTI
ಹೊಸದಿಲ್ಲಿ : ಉತ್ತರಪ್ರದೇಶದ ಉನ್ನಾವೊದಲ್ಲಿ 2017ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರಗೈದಿರುವುದಕ್ಕಾಗಿ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಬಿಜೆಪಿಯ ಮಾಜಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ನಿಗೆ ದಿಲ್ಲಿ ಹೈಕೋರ್ಟ್ ಗುರುವಾರ ವೈದ್ಯಕೀಯ ನೆಲೆಯಲ್ಲಿ ಎರಡು ವಾರಗಳ ಮಧ್ಯಂತರ ಜಾಮೀನು ನೀಡಿದೆ.
ನ್ಯಾಯಮೂರ್ತಿ ಪ್ರತಿಭಾ ಎಮ್. ಸಿಂಗ್ ನೇತೃತ್ವದ ನ್ಯಾಯಪೀಠವೊಂದು, ಸೆಂಗರ್ನ ಶಿಕ್ಷೆಯನ್ನು ತಾತ್ಕಾಲಿಕವಾಗಿ ಅಮಾನತಿನಲ್ಲಿಟ್ಟಿತು ಮತ್ತು ಆತನ ವೈದ್ಯಕೀಯ ತಪಾಸಣೆಗಾಗಿ ದಿಲ್ಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಸೇರಿಸುವಂತೆ ನಿರ್ದೇಶನ ನೀಡಿತು. ಆಸ್ಪತ್ರೆಯಿಂದ ಬಿಡುಗಡೆಗೊಂಡ ಬಳಿಕ ದೋಷಿಯು ದಿಲ್ಲಿಯಲ್ಲೇ ಇರಬೇಕು ಎಂದು ಹೇಳಿತು.
‘‘ಪ್ರಕರಣದ ಇತಿಹಾಸ ಮತ್ತು ಅರ್ಜಿದಾರನ ವೈದ್ಯಕೀಯ ಸ್ಥಿತಿಗತಿಯನ್ನು ಪರಿಗಣಿಸಿ, ಅರ್ಜಿದಾರನನ್ನು ಎರಡು ವಾರಗಳ ಮಧ್ಯಂತರ ಜಾಮೀನಿನಲ್ಲಿ ಬಿಡುಗಡೆಗೊಳಿಸಬೇಕು ಎಂಬುದಾಗಿ ನಿರ್ದೇಶಿಸಲಾಗಿದೆ. ಅವರು ಸಮಗ್ರ ವೈದ್ಯಕೀಯ ತಪಾಸಣೆಗಾಗಿ ಏಮ್ಸ್ ದಿಲ್ಲಿಗೆ ದಾಖಲಾಗಬೇಕು’’ ಎಂದು ನ್ಯಾಯಮೂರ್ತಿ ಅಮಿತ್ ಶರ್ಮಾ ಅವರನ್ನೂ ಒಳಗೊಂಡ ನ್ಯಾಯಪೀಠವು ಹೇಳಿದೆ.
ಅತ್ಯಾಚಾರ ಸಂತ್ರಸ್ತೆಯ ತಂದೆಯು ಪೊಲೀಸ್ ಕಸ್ಟಡಿಯಲ್ಲಿ ಸಾವಿಗೀಡಾದ ಪ್ರಕರಣದಲ್ಲಿ ಸೆಂಗರ್ 10 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದಾನೆ. ಆ ಪ್ರಕರಣದಲ್ಲಿ ಮಧ್ಯಂತರ ಜಾಮೀನು ಕೋರಿ ಅವನು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ನ ಇನ್ನೊಂದು ಪೀಠ ನಡೆಸುತ್ತಿದೆ.
ಅತ್ಯಾಚಾರ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯವು ನೀಡಿರುವ ಜೀವಾವಧಿ ಶಿಕ್ಷೆಯನ್ನು ಪ್ರಶ್ನಿಸಿ ದೋಷಿ ಸೆಂಗರ್ ಸಲ್ಲಿಸಿರುವ ಅರ್ಜಿಯು ದಿಲ್ಲಿ ಹೈಕೋರ್ಟ್ನಲ್ಲಿ ವಿಚಾರಣೆಗೆ ಬಾಕಿಯಿದೆ.
ಸೆಂಗರ್ 2017ರಲ್ಲಿ ಬಾಲಕಿಯು ಅಪ್ರಾಪ್ರೆಯಾಗಿದ್ದಾಗ ಆಕೆಯನ್ನು ಅಪಹರಿಸಿ ಅತ್ಯಾಚಾರಗೈದಿದ್ದನು.