ಬೇಡದ ಮಗಳಾಗಿ ಜನಿಸಿ, ಐಎಎಸ್ ಅಧಿಕಾರಿ ಆಗುವವರೆಗಿನ ರೋಚಕ ಪಯಣ | ಮಹಾರಾಷ್ಟ್ರದ ಅಧಿಕಾರಿ ಸಂಜಿತಾ ಮೊಹಾಪಾತ್ರರಿಂದ ಜೀವನ ಯಾತ್ರೆಯ ಮೆಲುಕು

ಸಂಜಿತಾ ಮೊಹಾಪಾತ್ರ | PC : X \ @sanjita1609
ಅಮರಾವತಿ: ಬೇಡದ ಮಗಳಾಗಿ ಜನಿಸಿ, ನಂತರ ಐಎಎಸ್ ಅಧಿಕಾರಿಯಾಗುವವರೆಗಿನ ತಮ್ಮ ಜೀವನ ಯಾತ್ರೆಯ ಕುರಿತು ಮಹಾರಾಷ್ಟ್ರ ಐಎಎಸ್ ಅಧಿಕಾರಿ ಸಂಜಿತಾ ಮೊಹಾಪಾತ್ರ ಮೆಲುಕು ಹಾಕಿದ್ದಾರೆ.
ದೃಢತೆ ಹಾಗೂ ಅರ್ಪಣಾ ಮನೋಭಾವದಿಂದ ತಾನು ಹೇಗೆ ಈ ಹಂತಕ್ಕೆ ಬೆಳೆದು ನಿಂತೆ ಎಂದು ಅವರು ಸ್ಮರಿಸಿದ್ದಾರೆ. ಸಂಜಿತಾ ಮೊಹಾಪಾತ್ರ ಮಹಾರಾಷ್ಟ್ರದ ಅಮರಾವತಿ ಜಿಲ್ಲಾ ಪರಿಷತ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದು, ಅವರೀಗ ಜಿಲ್ಲೆಯಲ್ಲಿ ಶಿಕ್ಷಣ ಮತ್ತು ಆರೋಗ್ಯ ಸೌಕರ್ಯಗಳನ್ನು ಸುಧಾರಿಸುವತ್ತ ತಮ್ಮ ಗಮನ ಕೇಂದ್ರೀಕರಿಸಿದ್ದಾರೆ.
ಕೆಲ ದಿನಗಳ ಹಿಂದೆ ನಡೆದ ಪತ್ರಿಕಾಗೋಷ್ಠಿಯಲ್ಲಿ, ನಾನು ಒಡಿಶಾದ ರೂರ್ಕೆಲಾದಲ್ಲಿ ಬಡ ಕುಟುಂಬವೊಂದರಲ್ಲಿ ಜನಿಸಿದೆ. ನನ್ನ ಹಿರಿಯ ಸಹೋದರಿಯ ನಂತರ ಗಂಡು ಮಗುವಿನ ನಿರೀಕ್ಷೆಯಲ್ಲಿದ್ದ ನನ್ನ ತಾಯಿ, ನನ್ನ ಜನನದಿಂದ ಅತೃಪ್ತರಾಗಿದ್ದರು ಎಂದು ಸಂಜಿತಾ ಮೊಹಾಪಾತ್ರ ಸ್ಮರಿಸಿದ್ದರು.
ನನ್ನ ಕುಟುಂಬವು ನನ್ನನ್ನು ಅಕ್ಷರಶಃ ಅನಾಥನನ್ನಾಗಿಸಿತು. ಆದರೆ, ನನ್ನ ಹಿರಿಯ ಸಹೋದರಿಯ ಕಾರಣಕ್ಕೆ ನನ್ನ ಪೋಷಕರು ನನ್ನನ್ನು ಜೊತೆಯಲ್ಲಿಟ್ಟುಕೊಂಡಿದ್ದರು ಎಂದು 34 ವರ್ಷದ ಐಎಎಸ್ ಅಧಿಕಾರಿ ಮೊಹಾಪಾತ್ರ ಬಹಿರಂಗಪಡಿಸಿದ್ದಾರೆ.
ನಾನು ನನ್ನ ಶಿಕ್ಷಣವನ್ನು ಪೂರೈಸಲು ಸಾಮಾಜಿಕ ಸಂಘಟನೆಗಳು, ಶಿಕ್ಷಕರು ಹಾಗೂ ವಿದ್ಯಾರ್ಥಿ ವೇತನವನ್ನು ಅವಲಂಬಿಸಬೇಕಾಗಿತ್ತು ಎಂದೂ ಅವರು ಹೇಳಿದ್ದಾರೆ. ಮೆಕಾನಿಕಲ್ ಇಂಜಿನಿಯರಿಂಗ್ ನಲ್ಲಿ ಪದವಿ ಪಡೆದ ನಂತರ, ಅವರು ಭಾರತೀಯ ಉಕ್ಕು ಪ್ರಾಧಿಕಾರದಲ್ಲಿ ಸಹಾಯಕ ವ್ಯವಸ್ಥಾಪಕರಾಗಿ ನೇಮಕಗೊಂಡರು. ಈ ಅವಧಿಯಲ್ಲಿ ಅವರು ತಮ್ಮ ಪೋಷಕರಿಗೆ ತಮ್ಮ ಗ್ರಾಮದಲ್ಲಿ ಮನೆಯೊಂದನ್ನು ನಿರ್ಮಿಸಿಕೊಳ್ಳಲು ನೆರವು ನೀಡಿದರು.
ಹೀಗಿದ್ದೂ, ನನ್ನ ಪೋಷಕರಿಗೆ ನನ್ನ ಸಾಧನೆಯ ಬಗ್ಗೆ ಹೆಮ್ಮೆ ಇರಲಿಲ್ಲ ಎಂದೂ ಅವರು ಹೇಳಿಕೊಂಡಿದ್ದಾರೆ.
ಸಣ್ಣ ವಯಸ್ಸಿನಿಂದಲೂ ಐಎಎಸ್ ಅಧಿಕಾರಿಯಾಗಲು ಬಯಸಿದ್ದ ಸಂಜಿತಾ ಮೊಹಾಪಾತ್ರ, ತಮ್ಮ ಪತಿಯ ಪ್ರೋತ್ಸಾಹ ಮತ್ತು ಬೆಂಬಲದಿಂದ 2019ರ ಐದನೆ ಪ್ರಯತ್ನದಲ್ಲಿ ಅವರು ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದರು.
ಅಮರಾವತಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ನಾನು ಸ್ವಸಹಾಯ ಗುಂಪುಗಳಲ್ಲಿ ಮಹಿಳೆಯರನ್ನು ಸಬಲೀಕರಣಗೊಳಿಸಲು ಹಾಗೂ ಜಿಲ್ಲಾ ಪರಿಷತ್ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಬಯಸಿದ್ದೇನೆ ಎನ್ನುತ್ತಾರೆ ಸಂಜಿತಾ ಮೊಹಾಪಾತ್ರ.
ಸ್ವಸಹಾಯ ಗುಂಪುಗಳಿಗೆ ಬ್ರ್ಯಾಂಡಿಂಗ್ ನಿಂದ ಹಿಡಿದು ಪ್ಯಾಕೇಜಿಂಗ್ ಹಾಗೂ ಮಾರುಕಟ್ಟೆ ಮಾಡುವವರೆಗೆ ಅವಕ್ಕೆ ಸಣ್ಣ ಮಾರುಕಟ್ಟೆ ಸೃಷ್ಟಿಸುವತ್ತ ಅವರು ಗಮನ ಕೇಂದ್ರೀಕರಿಸಿದ್ದಾರೆ.