ಉತ್ತರ ಪ್ರದೇಶ ಉಪ ಚುನಾವಣೆ | ಪೊಲೀಸರು ಮತದಾರರನ್ನು ಹೆದರಿಸುತ್ತಿದ್ದಾರೆ ಎಂದು ಆರೋಪಿಸಿದ ಸಮಾಜವಾದಿ ಪಕ್ಷ
Screengrab:X/@yadavakhilesh
ಲಕ್ನೊ: ಉತ್ತರ ಪ್ರದೇಶ ವಿಧಾನಸಭಾ ಉಪ ಚುನಾವಣೆಗಳು ಪ್ರಗತಿಯಲ್ಲಿದ್ದು, ಪೊಲೀಸ್ ಸಿಬ್ಬಂದಿಗಳು ಕೆಲವು ಮತದಾರರಿಗೆ ಮತದಾನ ಮಾಡದಂತೆ ಹೆದರಿಸುತ್ತಿದ್ದಾರೆ ಎಂದು ಬುಧವಾರ ಸಮಾಜವಾದಿ ಪಕ್ಷ ಆರೋಪಿಸಿದೆ. ಇದೇ ವೇಳೆ, ಕೆಲವು ಬುರ್ಖಾಧಾರಿ ಮಹಿಳೆಯರ ಮುಖಭಾವವು ಗುರುತಿನ ಚೀಟಿಯೊಂದಿಗೆ ಹೊಂದಾಣಿಕೆಯಾಗುತ್ತಿಲ್ಲ ಎಂದು ಬಿಜೆಪಿ ಆರೋಪಿಸಿದೆ. ಈ ಸಂಬಂಧ ಮಧ್ಯಪ್ರವೇಶಿಸಬೇಕು ಎಂದು ಸಮಾಜವಾದಿ ಪಕ್ಷ ಮತ್ತು ಬಿಜೆಪಿಗಳೆರಡೂ ಚುನಾವಣಾ ಆಯೋಗವನ್ನು ಆಗ್ರಹಿಸಿವೆ.
ವಿಡಿಯೊ ಸಾಕ್ಷ್ಯಗಳನ್ನು ಆಧರಿಸಿ ಮತದಾರರಿಗೆ ಬೆದರಿಕೆ ಒಡ್ಡುತ್ತಿರುವುದನ್ನು ತಕ್ಷಣವೇ ಗಂಭೀರವಾಗಿ ಪರಿಗಣಿಸಬೇಕು ಹಾಗೂ ಶಿಕ್ಷಾರ್ಹ ಕ್ರಮ ಕೈಗೊಂಡು, ನ್ಯಾಯಯುತ ಚುನಾವಣೆಯನ್ನು ಖಾತರಿಪಡಿಸಬೇಕು ಎಂದು ಸುಪ್ರೀಂ ಕೋರ್ಟ್ ಹಾಗೂ ಚುನಾವಣಾ ಆಯೋಗವನ್ನು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಆಗ್ರಹಿಸಿದ್ದಾರೆ. ಇದಕ್ಕೂ ಮುನ್ನ, ಮತದಾನದ ದಿನ ಕೇವಲ ಚುನಾವಣಾಧಿಕಾರಿಗಳಿಗೆ ಗುರುತಿನ ಚೀಟಿ ಪರಿಶೀಲಿಸುವ ಅಧಿಕಾರವಿದೆಯೇ ಹೊರತು, ಪೊಲೀಸ್ ಅಧಿಕಾರಿಗಳಿಗಲ್ಲ ಎಂದು ನಿರ್ದೇಶನ ನೀಡಬೇಕು ಎಂದು ಚುನಾವಣಾ ಆಯೋಗವನ್ನು ಸಮಾಜವಾದಿ ಪಕ್ಷ ಕೋರಿತ್ತು.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅಖಿಲೇಶ್ ಯಾದವ್, “ಮತದಾರರ ಗುರುತಿನ ಚೀಟಿ ಹಾಗೂ ಆಧಾರ್ ಚೀಟಿಗಳನ್ನ ಪರಿಶೀಲಿಸುತ್ತಿರುವ ಎಲ್ಲ ಪೊಲೀಸ್ ಅಧಿಕಾರಿಗಳನ್ನು ವಿಡಿಯೊ ಸಾಕ್ಷ್ಯವನ್ನು ಆಧರಿಸಿ ತಕ್ಷಣದಿಂದಲೇ ಅಮಾನತುಗೊಳಿಸಬೇಕು. ಆಧಾರ್ ಚೀಟಿ ಅಥವಾ ಗುರುತಿನ ಚೀಟಿ ಪರಿಶೀಲಿಸುವ ಅಧಿಕಾರ ಪೊಲೀಸರಿಗಿಲ್ಲ” ಎಂದು ಹೇಳಿದ್ದಾರೆ.
ಈ ಪೋಸ್ಟ್ ನೊಂದಿಗೆ, ಜನರು ಮತದಾನದಿಂದ ಹಿಂಜರಿಯುವಂತೆ ಪೊಲೀಸ್ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ ಎಂದು ಮುಝಾಫ್ಫರ್ ನಗರ್ ಜಿಲ್ಲೆಯ ಮೀರಾಪುರ್ ವಿಧಾನಸಭಾ ಕ್ಷೇತ್ರದ ಸಮಾಜವಾದಿ ಪಕ್ಷದ ಅಭ್ಯರ್ಥಿ ಸುಮ್ಬುಲ್ ರಾಣಾ ಆರೋಪಿಸಿರುವ ವಿಡಿಯೊವನ್ನು ಅಖಿಲೇಶ್ ಯಾದವ್ ಹಂಚಿಕೊಂಡಿದ್ದಾರೆ.