ಬೀಡಾಡಿ ಜಾನುವಾರುಗಳು ಹೊಲ ಪ್ರವೇಶಿಸಿದ್ದಕ್ಕೆ ವಾಗ್ವಾದ; ರೈತನ ಥಳಿಸಿ ಹತ್ಯೆ
ಬರೇಲಿ: ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಗ್ರಾಮವೊಂದರಲ್ಲಿ ಬೀಡಾಡಿ ಜಾನುವಾರುಗಳು ಹೊಲದೊಳಗೆ ಪ್ರವೇಶಿಸುತ್ತಿರುವ ಬಗ್ಗೆ ಎರಡು ತಂಡಗಳ ನಡುವೆ ವಾಗ್ವಾದ ವೇಳೆ ನಡೆದ ಘರ್ಷಣೆಯಲ್ಲಿ 45 ವರ್ಷದ ರೈತನೊಬ್ಬನನ್ನು ಥಳಿಸಿ ಹತ್ಯೆಗೈಯಲಾಗಿದೆ ಹಾಗೂ ಆತನ ಕುಟುಂಬದ ಇಬ್ಬರು ಗಾಯಗೊಂಡಿದ್ದಾರೆ.
ವಿಶಾರತಗಂಜ್ ಪ್ರದೇಶದ ಫತೇಪುರ ಥಾಕೂರಾನ್ ಗ್ರಾಮದಲ್ಲಿ ಶನಿವಾರ ಸಂಜೆ ಈ ಘಟನೆ ನಡೆದಿದೆ. ವೀರಪಾಲ್ ಸಿಂಗ್ ಅವರು ತನ್ನ ಸಹೋದರರ ಜೊತೆ ಹೊಲಕ್ಕೆ ತೆರಳುತ್ತಿದ್ದಾಗ ರಾತ್ರಿ 9:00 ಗಂಟೆಯ ಸುಮಾರಿಗೆ ಕೆಲವು ಬಿಡಾಡಿ ಜಾನುವಾರುಗಳು ತೋಟವನ್ನು ಪ್ರವೇಶಿಸಿದ್ದವು.
ಅವುಗಳನ್ನು ಅವರು ಓಡಿಸಿಕೊಂಡು ಹೋದರು. ಆಗ ಸ್ವಲ್ಪ ದೂರದಲ್ಲಿದ್ದ ಕೆಲವರು ಸಿಂಗ್ ಹಾಗೂ ಆತನ ಸಹೋದರರು ಬೀಡಾಡಿ ಪ್ರಾಣಿಗಳನ್ನು ತಮ್ಮ ಹೊಲಕ್ಕೆ ಓಡಿಸುತ್ತಿದ್ದಾನೆಂದು ಭಾವಿಸಿ ವಾಗ್ವಾದಕ್ಕಿಳಿದರು. ಈ ಸಂದರ್ಭದಲ್ಲಿ ನಡೆದ ಹೊಡೆದಾಟದಲ್ಲಿ ನಾನ್ಹೆ ಎಂಬಾತ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಇನ್ನಿಬ್ಬರು ಸಹೋದರರಾದ ಮುಖೇಶ್ ಹಾಗೂ ಸುರ್ಜಿತ್ ಗಾಯಗೊಂಡರು.
ಎದುರು ಗುಂಪಿನವರು ತಮ್ಮ ಮೇಲೆ ಗುಂಡಿನಿಂದ ದಾಳಿ ನಡೆಸಿರುವುದಾಗಿಯೂ ವೀರಪಾಲ್ ಸಿಂಗ್ ಆಪಾದಿಸಿದ್ದಾರೆ.
ಘರ್ಷಣೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಪೊಲೀಸರ ತಂಡವೊಂದು ಸ್ಥಳಕ್ಕಾಗಮಿಸಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದೆ ಹಾಗೂ ಮುಂದಿನ ತನಿಖೆಯನ್ನು ನಡೆಸುತ್ತಿದೆ.