ಉತ್ತರಪ್ರದೇಶ | ಆ್ಯಂಬುಲೆನ್ಸ್ ನಲ್ಲೇ ಮಹಿಳೆಗೆ ಲೈಂಗಿಕ ಕಿರುಕುಳ
ಪ್ರತಿರೋಧವೊಡ್ಡಿದಾಗ ಪತಿ ಜೊತೆ ಹೊರತಳ್ಳಿದ ಸಿಬ್ಬಂದಿಗಳು, ಪತಿ ಮೃತ್ಯು
ಸಾಂಧರ್ಭಿಕ ಚಿತ್ರ | Photo : indianexpress.com
ಲಕ್ನೋ: ಆ್ಯಂಬುಲೆನ್ಸ್ ನಲ್ಲಿ ತನ್ನ ಪತಿಯೊಂದಿಗೆ ಆಸ್ಪತ್ರೆಗೆ ತೆರಳುತ್ತಿದ್ದ ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಆಕೆ ಮತ್ತು ರೋಗಿಯಾಗಿದ್ದ ಆಕೆಯ ಪತಿಯನ್ನು ಆಕ್ಸಿಜನ್ ಸಿಲಿಂಡರ್ ತೆಗೆದು ಆ್ಯಂಬುಲೆನ್ಸ್ ನಿಂದ ಹೊರಗೆ ತಳ್ಳಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಸಿದ್ಧಾರ್ಥನಗರ ಜಿಲ್ಲೆಯಲ್ಲಿ ನಡೆದಿದೆ ಎಂದು NDTV ವರದಿ ಮಾಡಿದೆ.
ಮಹಿಳೆಯೋರ್ವರು ಅನಾರೋಗ್ಯದಿಂದ ಬಳಲುತ್ತಿದ್ದ ತನ್ನ ಪತಿ ಹರೀಶ್ ಅವರನ್ನು ಸಮೀಪದ ಬಸ್ತಿ ವೈದ್ಯಕೀಯ ಕಾಲೇಜಿಗೆ ಕರೆದುಕೊಂಡು ಹೋಗಿದ್ದರು. ಅವರ ಸ್ಥಿತಿ ಗಂಭೀರವಾಗಿದ್ದರಿಂದ ಆಸ್ಪತ್ರೆಯ ವೈದ್ಯರು ಅವರನ್ನು ಬೇರೆ ಆಸ್ಪತ್ರೆಗೆ ಕಳುಹಿಸಿದ್ದಾರೆ. ಆದರೆ ಖಾಸಗಿ ಆಸ್ಪತ್ರೆಯ ಶುಲ್ಕ ಕಟ್ಟಲು ಸಾಧ್ಯವಿಲ್ಲ ಎಂದು ಮಹಿಳೆ ತನ್ನ ಪತಿಯನ್ನು ಮನೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲು ತೀರ್ಮಾನಿಸಿದ್ದಾರೆ.
ಕರೆದೊಯ್ಯಲು ಆ್ಯಂಬುಲೆನ್ಸ್ ಗೆ ಕರೆ ಮಾಡಿದ್ದಾರೆ. ಆ್ಯಂಬುಲೆನ್ಸ್ ನಲ್ಲಿ ಚಾಲಕ ತನ್ನ ಬಳಿ ಕುಳಿತುಕೊಳ್ಳುವಂತೆ ಮಹಿಳೆಗೆ ಬಲವಂತ ಮಾಡಿದ್ದಾನೆ. ಬಳಿಕ ಸಹಾಯಕನ ಜೊತೆ ಸೇರಿ ಮಹಿಳೆಗೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈ ವೇಳೆ ಮಹಿಳೆ ವಿರೋಧಿಸಿದ್ದು, ದುಷ್ಕರ್ಮಿಗಳು ಮಹಿಳೆಯ ಅನಾರೋಗ್ಯ ಪೀಡಿತ ಪತಿಯ ಆಕ್ಸಿಜನ್ ಪೂರೈಕೆಯನ್ನು ನಿಲ್ಲಿಸಿ ಇಬ್ಬರನ್ನು ಕೂಡ ಆ್ಯಂಬುಲೆನ್ಸ್ ನಿಂದ ಹೊರಕ್ಕೆ ತಳ್ಳಿದ್ದಾರೆ ಎಂದು ತಿಳಿದು ಬಂದಿದೆ.
ಆ್ಯಂಬುಲೆನ್ಸ್ ಚಾಲಕ ತನ್ನ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ್ದಾನೆ, ನನ್ನ ಪತಿಗೆ ಆಕ್ಸಿಜನ್ ಪೂರೈಕೆ ಸ್ಥಗಿತಗೊಳಿಸಿ ಹೊರಗೆ ತಳ್ಳಿದ ಬಳಿಕ ಅವರಿಗೆ ಗಂಭೀರವಾಗಿ ಗಾಯಗಳಾಗಿದೆ ಮತ್ತು ಅವರ ಸ್ಥಿತಿ ಮತ್ತಷ್ಟು ಹದಗೆಟ್ಟಿತ್ತು ಎಂದು ಸಂತ್ರಸ್ತ ಮಹಿಳೆ ಹೇಳಿದ್ದಾರೆ.
ಘಟನೆ ಬಳಿಕ ಸಂತ್ರಸ್ತೆಯ ಸಹೋದರ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದು, ಮಹಿಳೆಯ ಪತಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ಘಟನೆ ಬಳಿಕ ಆ್ಯಂಬುಲೆನ್ಸ್ ಚಾಲಕ ಮತ್ತು ಆತನ ಸಹಾಯಕನನ್ನು ಬಂಧಿಸಲು ಪೊಲೀಸರು ಯಾವುದೇ ಪ್ರಯತ್ನ ಮಾಡಿಲ್ಲ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಈ ಸಂಬಂಧ ಲಕ್ನೋದ ಗಾಜಿಪುರ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ಕೂಡ ದಾಖಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಲಕ್ನೋ ಉತ್ತರದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಜಿತೇಂದ್ರ ದುಬೆ, ಘಟನೆಯ ಬಗ್ಗೆ ಸಿದ್ಧಾರ್ಥನಗರ ಜಿಲ್ಲೆಯ ಮಹಿಳೆಯೊಬ್ಬರು ಲಕ್ನೋದ ಗಾಜಿಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.