ಉತ್ತರ ಪ್ರದೇಶ | ಒತ್ತೆ ಹಣಕ್ಕೆ ಬರೆದ ಟಿಪ್ಪಣಿಯಲ್ಲಿ ಅಕ್ಷರ ತಪ್ಪು ; ಸುಳ್ಳು ಅಪಹರಣ ಪ್ರಕರಣವನ್ನು ಭೇದಿಸಿದ ಪೊಲೀಸರು
ಸಾಂದರ್ಭಿಕ ಚಿತ್ರ
ಹರ್ದೋಯಿ: ಒತ್ತೆ ಹಣಕ್ಕಾಗಿ ಕಳುಹಿಸಿದ್ದ ಟಿಪ್ಪಣಿಯಲ್ಲಿ ಕಂಡು ಬಂದ ಅಕ್ಷರ ದೋಷವನ್ನು ಆಧರಿಸಿ ಸುಳ್ಳು ಅಪಹರಣ ಪ್ರಕರಣವೊಂದನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ವ್ಯಕ್ತಿಯೊಬ್ಬ ತನ್ನ ಹಿರಿಯ ಸೋದರನಿಗೆ 50,000 ರೂ. ವಂಚಿಸಲು ಈ ಒತ್ತೆ ಟಿಪ್ಪಣಿಯನ್ನು ಬರೆದಿದ್ದ ಎಂದು ಬುಧವಾರ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ಘಟನೆ ಜನವರಿ 5ರಂದು ಬೆಳಕಿಗೆ ಬಂದಿದ್ದು, ನನ್ನ ತಮ್ಮ ಸಂದೀಪ್ (27) ಅನ್ನು ಅಪಹರಿಸಲಾಗಿದ್ದು, ಆತನನ್ನು ಬಿಡುಗಡೆ ಮಾಡಲು 50,000 ರೂ. ಒತ್ತೆ ಹಣ ನೀಡಬೇಕು ಎಂಬ ಬೆದರಿಕೆಯ ಟಿಪ್ಪಣಿಯು ಅಪರಿಚಿತ ಸಂಖ್ಯೆಯಿಂದ ನನ್ನ ಮೊಬೈಲ್ ಗೆ ಬಂದಿದೆ ಎಂದು ಹರ್ದೋಯಿ ಜಿಲ್ಲೆಯ ಬಂಡಾರಹ ಗ್ರಾಮದ ಗುತ್ತಿಗೆದಾರರಾದ ಸಂಜಯ್ ಕುಮಾರ್ ಎಂಬುವವರು ಪೊಲೀಸರಿಗೆ ದೂರು ನೀಡಿದ್ದರು.
ಒಂದು ವೇಳೆ ಹಣ ನೀಡಿದಿದ್ದರೆ, ನಿಮ್ಮ ತಮ್ಮನನ್ನು ಹತ್ಯೆಗೈಯ್ಯಲಾಗುವುದು ಎಂದು ಆ ಟಿಪ್ಪಣಿಯಲ್ಲಿ ಬೆದರಿಸಲಾಗಿತ್ತು. ಇದರೊಂದಿಗೆ ಸಂಜಯ್ ಕುಮಾರ್ ಅವರ ತಮ್ಮನನ್ನು ಹಗ್ಗದಲ್ಲಿ ಕಟ್ಟಿ ಹಾಕಿರುವ 13 ಸೆಕೆಂಡ್ ಗಳ ವಿಡಿಯೊವೂ ಅವರು ಮೊಬೈಲ್ ಗೆ ರವಾನೆಯಾಗಿತ್ತು.
ಒತ್ತೆ ಟಿಪ್ಪಣಿಯಲ್ಲಿ ‘death’ ಎಂಬ ಪದದ ಬದಲು ‘deth’ ಎಂಬ ತಪ್ಪು ಪದ ಬಳಸಿದ್ದದ್ದು ಈ ಕೃತ್ಯ ಎಸಗಿರುವ ವ್ಯಕ್ತಿ ತೀರಾ ವಿದ್ಯಾವಂತನಲ್ಲ ಎಂಬ ಸುಳಿವು ನಮಗೆ ನೀಡಿತು ಎಂದು ಪೊಲೀಸ್ ವರಿಷ್ಠಾಧಿಕಾರಿ ನೀರಜ್ ಕುಮಾರ್ ಜದೌನ್ ತಿಳಿಸಿದ್ದಾರೆ.
ಆದರೆ, ಸಂಜಯ್ ಕುಮಾರ್ ಗೆ ಯಾರೊಂದಿಗೂ ಹಗೆತನ ಇಲ್ಲದಿದ್ದದ್ದು ಹಾಗೂ ಒತ್ತೆ ಹಣದ ಮೊತ್ತವೂ ಹೆಚ್ಚಿಲ್ಲದೆ ಇದ್ದುದರಿಂದ ಅನುಮಾನ ಹೆಚ್ಚಾಯಿತು ಎಂದು ಅವರು ಹೇಳಿದ್ದಾರೆ.
ಮೊಬೈಲ್ ಫೋನ್ ಲೊಕೇಶನ್ ಅನ್ನು ಹಿಂಬಾಲಿಸಿದ ಪೊಲೀಸರಿಗೆ ಸಂದೀಪ್ ರೂಪಾಪುರ್ ನಲ್ಲಿ ಪತ್ತೆಯಾಗಿದ್ದಾನೆ. ವಿಚಾರಣೆಯ ಸಂದರ್ಭದಲ್ಲಿ ಆತನಿಗೆ ಒತ್ತೆ ಹಣದ ಟಿಪ್ಪಣಿ ಬರೆಯುವಂತೆ ಪೊಲೀಸರು ಸೂಚಿಸಿದ್ದಾರೆ. ಆಗ ಆತ ಮತ್ತೆ death ಪದದ ಬದಲು deth ಎಂದು ತಪ್ಪು ಪದವನ್ನು ಬರೆದಿದ್ದಾನೆ ಎಂದು ಅವರು ತಿಳಿಸಿದ್ದಾರೆ.
ನಂತರ, ತಾನು ತನ್ನ ಅಪಹರಣದ ನಕಲಿ ನಾಟಕವಾಡಿದೆ ಎಂದು ಆತ ಒಪ್ಪಿಕೊಂಡಿದ್ದು, ‘CID’ ಎಂಬ ಜನಪ್ರಿಯ ಸರಣಿಯನ್ನು ನೋಡಿದ ನಂತರ, ನನ್ನ ಸಹೋದರನಿಂದ ಹಣ ಸುಲಿಗೆ ಮಾಡುವ ಈ ಉಪಾಯ ಹೊಳೆಯಿತು ಎಂದು ಆತ ತಿಳಿಸಿದ್ದಾನೆ ಎಂದು ಅವರು ಹೇಳಿದ್ದಾರೆ.
ಮಿರ್ಝಾಪುರದಲ್ಲಿ ಬಿದಿರು ಖರೀದಿದಾರನಾಗಿ ಕೆಲಸ ಮಾಡುತ್ತಿದ್ದ ಸಂದೀಪ್ ನ ಬೈಕ್ ಡಿಸೆಂಬರ್ 30ರಂದು ವೃದ್ಧರೊಬ್ಬರಿಗೆ ಡಿಕ್ಕಿ ಹೊಡೆದು, ಅವರ ಕಾಲಿನ ಮೂಳೆ ಮುರಿದಿತ್ತು. ಗಾಯಗೊಂಡ ವೃದ್ಧ, ಪರಿಹಾರಕ್ಕಾಗಿ ಒತ್ತಾಯಿಸುತ್ತಿದ್ದುದರಿಂದ, ಸಂದೀಪ್ ಹಣದ ಅನಿವಾರ್ಯತೆಗೆ ಒಳಗಾಗಿದ್ದ ಎಂದು ತಿಳಿಸಿದ ಅವರು, ಆರೋಪಿಯನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.