ಶುಲ್ಕರಹಿತವಾಗಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ಸೆ.14 ಕೊನೆಯ ದಿನ; ನವೀಕರಣ ಮಾಡುವುದು ಹೇಗೆ?
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಗುರುತಿನ ಮತ್ತು ವಿಳಾಸದ ಪುರಾವೆಯಾಗಿರುವ ಆಧಾರ್ ಕಾರ್ಡ್ ಹೊಂದಿರುವುದು ಪ್ರತಿಯೊಬ್ಬರಿಗೂ ಅನಿವಾರ್ಯವಾಗಿದೆ. ಪ್ರತಿ ಹತ್ತು ವರ್ಷಗಳಿಗೊಮ್ಮೆ ಆಧಾರ್ ಕಾರ್ಡ್ನ್ನು ನವೀಕರಿಸುವುದು ಅಗತ್ಯವಾಗಿದೆ. ಹಲವರು 10 ವರ್ಷಗಳ ಹಿಂದೆಯೇ ಆಧಾರ್ ಕಾರ್ಡ್ ಪಡೆದಿರುವುದರಿಂದ ತಮ್ಮ ವಿವರಗಳನ್ನು ನವೀಕರಿಸುವಂತೆ ಸರಕಾರವು ಒತ್ತಾಯಿಸುತ್ತಿದ್ದು, ಶುಲ್ಕರಹಿತ ನವೀಕರಣಕ್ಕಾಗಿ ಸೆ.14ರವರೆಗೆ ಅವಕಾಶ ಕಲ್ಪಿಸಿದೆ. ಗಡುವನ್ನು ಹಲವಾರು ಬಾರಿ ವಿಸ್ತರಿಸಲಾಗಿದ್ದು, ಇನ್ನಷ್ಟು ವಿಸ್ತರಿಸಲಾಗುತ್ತದೆಯೇ ಎಂಬ ಬಗ್ಗೆ ಯಾವುದೇ ಮಾಹಿತಿಯಿಲ್ಲ.
ಹತ್ತು ವರ್ಷಗಳ ಹಿಂದೆ ಆಧಾರ್ ಕಾರ್ಡ್ ಪಡೆದುಕೊಂಡಿರುವವರು ನಿಗದಿತ 50 ರೂ.ಗಳ ಶುಲ್ಕದ ಹೊರೆಯಿಲ್ಲದೆ ಉಚಿತವಾಗಿ ನವೀಕರಣವನ್ನು ಹೇಗೆ ಮಾಡಿಸಬಹುದು ಎನ್ನುವುದು ಇಲ್ಲಿದೆ.....
► ನಿಮ್ಮ ಆದ್ಯತೆಯ ಬ್ರೌಸರ್ ತೆರೆಯಿರಿ ಮತ್ತು "https://myaadhaar.uidai.gov.in" ಗೆ ಹೋಗಿ.
► ತೆರೆದುಕೊಳ್ಳುವ ಪುಟದಲ್ಲಿ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ ಮತ್ತು ಕಾರ್ಡ್ಗೆ ಲಿಂಕ್ ಮಾಡಿರುವ ನಿಮ್ಮ ಮೊಬೈಲ್ಗೆ ಬಂದಿರುವ ಒಟಿಪಿಯನ್ನು ಟೈಪ್ ಮಾಡಿ.
► ಪೋರ್ಟಲ್ಗೆ ಲಾಗಿನ್ ಆದ ಬಳಿಕ ನಿಮ್ಮ ಹಾಲಿ ಗುರುತಿನ ಮತ್ತು ವಿಳಾಸದ ವಿವರಗಳು ಈಗಲೂ ಸರಿಯಿದೆಯೇ ಎನ್ನುವುದನ್ನು ಪರಿಶೀಲಿಸಿ
► ನಿಮ್ಮ ವಿಳಾಸ ಅಥವಾ ನಂಬರ್ನಲ್ಲಿ ಪರಿಷ್ಕರಣೆ ಅಗತ್ಯವಿದ್ದರೆ ನೀವು ಸಲ್ಲಿಸಬಯಸುವ ದಾಖಲೆಗಳನ್ನು ಡ್ರಾಪ್ ಡೌನ್ ಮೆನುವಿನಿಂದ ಆಯ್ಕೆ ಮಾಡಿ ಮತ್ತು ನೀವು ಬಯಸಿದ ಫೈಲ್ಗಳನ್ನು ಅಪ್ಲೋಡ್ ಮಾಡಿ
► ಈಗ ನಿಮ್ಮ ನವೀಕರಣ ಕೋರಿಕೆಯನ್ನು ಒಮ್ಮೆ ಪರಿಶೀಲಿಸಿದ ಬಳಿಕ ಅದನ್ನು ಸಲ್ಲಿಸಿದರೆ ನಿಮಗೆ ಸರ್ವಿಸ್ ರಿಕ್ವೆಸ್ಟ್ ನಂಬರ್(ಎಸ್ಆರ್ಎನ್) ದೊರೆಯುತ್ತದೆ. ಇದನ್ನು ನಿಮ್ಮ ಕೋರಿಕೆಯ ಪ್ರಗತಿಯನ್ನು ಪರಿಶೀಲಿಸಲು ಬಳಸಬಹುದು.
ಈ ಫೈಲ್ಗಳು 2MBಗಿಂತ ಕಡಿಮೆ ಗಾತ್ರದ್ದಾಗಿರಬೇಕು ಎನ್ನುವುದು ಗಮನದಲ್ಲಿರಲಿ. ಜೆಪಿಇಜಿ,ಪಿಎನ್ಜಿ ಮತ್ತು ಪಿಡಿಎಫ್ ಫೈಲ್ಗಳನ್ನು ಈ ಪೋರ್ಟ್ಲ್ ಬೆಂಬಲಿಸುತ್ತದೆ. ಆನ್ಲೈನ್ ಪೋರ್ಟಲ್ನ್ನು ಗುರುತಿನ ಪುರಾವೆ ಮತ್ತು ವಿಳಾಸದ ಪುರಾವೆಯನ್ನು ಅಪ್ಡೇಟ್ ಮಾಡಲು ಮಾತ್ರ ಬಳಸಬಹುದು.
ಬಯೊಮೆಟ್ರಿಕ್ಸ್,ಹೆಸರು,ಭಾವಚಿತ್ರ ಮತ್ತು ಮೊಬೈಲ್ ಸಂಖ್ಯೆಯಂತಹ ಇತರ ಮಾಹಿತಿಗಳನ್ನು ಅಪ್ಡೇಟ್ ಮಾಡಲು ಸಮೀಪದ ಆಧಾರ್ ಅಧಿಕೃತ ಕೇಂದ್ರಕ್ಕೆ ಭೇಟಿ ನೀಡಬೇಕಾಗುತ್ತದೆ.