ಭಾರತದಲ್ಲಿನ ಚಿಲ್ಲರೆ ಅಂಗಡಿಗಳಲ್ಲಿ ಯುಪಿಐ ವಹಿವಾಟು ಪ್ರಮಾಣ ಶೇ. 33ರಷ್ಟು ಜಿಗಿತ : ವರದಿ
ಸಾಂದರ್ಭಿಕ ಚಿತ್ರ | PC : freepik.com
ಹೊಸದಿಲ್ಲಿ: ಈ ವರ್ಷ ದೇಶದ ಅರೆಪಟ್ಟಣ ಹಾಗೂ ಗ್ರಾಮೀಣ ಭಾಗಗಳಲ್ಲಿ ಯುಪಿಐ ವಹಿವಾಟು ಪ್ರಮಾಣ ಶೇ. 33ರಷ್ಟು ಏರಿಕೆಯಾಗಿದ್ದು, ಡಿಜಿಟಲ್ ಪಾವತಿ ವ್ಯವಸ್ಥೆ ಅಳವಡಿಕೆಯಲ್ಲಿನ ಪ್ರಗತಿಯನ್ನು ಇದು ಪ್ರತಿಫಲಿಸುತ್ತಿದೆ ಎಂದು ವರದಿಯೊಂದರಲ್ಲಿ ಹೇಳಲಾಗಿದೆ.
ಇದಲ್ಲದೆ, ಜೀವ ವಿಮಾ ಖರೀದಿಗಳು ಹಾಗೂ ವಿಮಾ ಕಂತು ಸಂಗ್ರಹಗಳಲ್ಲಿ ನೂತನ ಗ್ರಾಹಕರು ಯುಪಿಐ ವಹಿವಾಟು ಬಳಸುವ ಪ್ರಮಾಣದಲ್ಲಿ ಕ್ರಮವಾಗಿ ಶೇ. 127 ಮತ್ತು ಶೇ. 96ರಷ್ಟು ಪ್ರಗತಿಯಾಗಿದೆ ಎಂದು ಶಾಖಾರಹಿತ ಬ್ಯಾಂಕಿಂಗ್ ವ್ಯವಸ್ಥೆ ಮತ್ತು ಡಿಜಿಟಲ್ ಜಾಲವಾದ PayNearby ಹೇಳಿದೆ.
“ಭಾರತದಾದ್ಯಂತ ವಿಮೆಯನ್ನು ವಿಸ್ತರಿಸುವ ಸವಾಲನ್ನು ಹಿಮ್ಮೆಟ್ಟಿಸಿರುವುದರಲ್ಲಿ ಡಿಜಿಟಲ್ ಚಿಲ್ಲರೆ ಮಳಿಗೆಗಳು ವಹಿಸಿರುವ ಪಾತ್ರದತ್ತ ದತ್ತಾಂಶ ಬೆಳಕು ಚೆಲ್ಲಿದೆ” ಎಂದು ವರದಿಯು ಹೇಳಿದೆ.
ಈ ವರದಿಯನ್ನು ಭಾರತದಾದ್ಯಂತ ಹರಡಿಕೊಂಡಿರುವ ಗ್ರಾಮೀಣ ಹಾಗೂ ಅರೆಪಟ್ಟಣಗಳಲ್ಲಿನ 10 ಲಕ್ಷ ಸಣ್ಣ ಚಿಲ್ಲರೆ ಮಳಿಗೆಗಳಿಂದ (ಕಿರಾಣಿ ಅಂಗಡಿಗಳು, ಮೊಬೈಲ್ ರೀಚಾರ್ಜ್ ಅಂಗಡಿಗಳು ಇತ್ಯಾದಿ) ಸಂಗ್ರಹಿಸಲಾಗಿರುವ ನೈಜ ವಹಿವಾಟು ದತ್ತಾಂಶದ ವಿಶ್ಲೇಷಣೆಯನ್ನು ಆಧರಿಸಿ ಸಿದ್ಧಪಡಿಸಲಾಗಿದೆ.
ಈ ಶೋಧನೆಗಳು ಜನವರಿ 2023ರಿಂದ ನವೆಂಬರ್ 2023ರವರೆಗಿನ ವ್ಯಾಪಾರ ದತ್ತಾಂಶಗಳನ್ನು ಜನವರಿ 2024ರಿಂದ ನವೆಂಬರ್ 2024ರವರೆಗಿನ ವ್ಯಾಪಾರ ದತ್ತಾಂಶಗಳೊಂದಿಗೆ ಹೋಲಿಕೆ ಮಾಡಿವೆ.
ಗ್ರಾಮೀಣ ಹಾಗೂ ಅರೆಪಟ್ಟಣ ಪ್ರದೇಶಗಳಲ್ಲಿನ ವ್ಯಾಪಾರ ಸಾಲಗಳು, ಚಿನ್ನದ ಸಾಲಗಳು, ವೈಯಕ್ತಿಕ ಸಾಲಗಳು ಹಾಗೂ ಆವರ್ತಿತ ಸಾಲಗಳು ಸೇರಿದಂತೆ ಸಾಲೋತ್ಪನ್ನಗಳು ಶೇ. 297ರಷ್ಟು ಗಮನಾರ್ಹ ಏರಿಕೆ ದಾಖಲಿಸಿವೆ ಎಂದು Retail O-Nomics ಎಂಬ ಹೆಸರಿನ ವರದಿಯಲ್ಲಿ ಹೇಳಲಾಗಿದೆ.
ಈ ಗಮನಾರ್ಹ ಪ್ರಮಾಣದ ಏರಿಕೆಯು ಬೇರು ಮಟ್ಟದಲ್ಲಿ ಸಾಲ ಸೌಲಭ್ಯಗಳ ಕುರಿತು ಬೆಳೆಯುತ್ತಿರುವ ಜಾಗೃತಿ ಹಾಗೂ ಬೇಡಿಕೆಯನ್ನು ಪ್ರತಿಫಲಿಸುತ್ತಿದೆ ಎಂದೂ ವರದಿಯಲ್ಲಿ ಹೇಳಲಾಗಿದೆ.
ಆದರೆ, 2024ರಲ್ಲಿ ಕಿರು ಎಟಿಎಂಗಳು ಹಾಗೂ ಆಧಾರ್ ಚಾಲಿತ ಪಾವತಿ ವ್ಯವಸ್ಥೆಯ ಮೂಲಕ ನಗದು ಹಿಂಪಡೆಯುವಿಕೆ ಇಳಿಕೆಯಾಗಿದೆ. ಎರಡೂ ವಹಿವಾಟುಗಳ ಗಾತ್ರ ಮತ್ತು ಪ್ರತಿ ವಹಿವಾಟಿನಲ್ಲಿನ ಸರಾಸರಿ ನಗದು ಹಿಂಪಡೆಯುವಿಕೆ ಪ್ರಮಾಣ ಕೊಂಚ ಇಳಿಕೆಯಾಗಿದ್ದು, 2023ರಲ್ಲಿ 2,624 ಕೋಟಿ ರೂಪಾಯಿ ಇದ್ದದ್ದು, 2024ರಲ್ಲಿ 2,482 ಕೋಟಿ ರೂಪಾಯಿಗೆ ಇಳಿಕೆಯಾಗಿದೆ ಎಂಬುದತ್ತ ವರದಿಯಲ್ಲಿ ಬೊಟ್ಟು ಮಾಡಲಾಗಿದೆ.
ವರ್ಷದ ಇತರ ಅವಧಿಗೆ ಹೋಲಿಸಿದರೆ, ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಂಥ ನೇರ ನಗದು ವರ್ಗಾವಣೆಯಡಿ ಫಲಾನುಭವಿಗಳಿಗೆ ಹಣ ಬಿಡುಗಡೆಯಾದಾಗ, ಆಧಾರ್ ಚಾಲಿತ ಪಾವತಿ ವ್ಯವಸ್ಥೆಯ ಮೂಲಕ ನಗದು ಹಣ ಹಿಂಪಡೆಯುವುದು ಶೇ. 35-45ರಷ್ಟು ಏರಿಕೆಯಾಗುವುದು ಕಂಡು ಬಂದಿದೆ.
“ಜಮ್ಮು ಮತ್ತು ಕಾಶ್ಮೀರದಲ್ಲಿ ನಗದು ಹಿಂಪಡೆಯುವಿಕೆಯ ಪ್ರಮಾಣವು ಮೌಲ್ಯದಲ್ಲಿ ಶೇ. 58ರಷ್ಟು ಹಾಗೂ ಗಾತ್ರದಲ್ಲಿ ಶೇ. 74ರಷ್ಟು ಗಮನಾರ್ಹ ಪ್ರಗತಿ ಸಾಧಿಸಿದೆ” ಎಂದು ವರದಿಯಲ್ಲಿ ಹೇಳಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ PayNearby ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಕುಮಾರ್ ಬಜಾಜ್, “ಸ್ಥಳೀಯ ಚಿಲ್ಲರೆ ವರ್ತಕರನ್ನು ವಿಮೆ, ಇ-ಕಾಮರ್ಸ್ ಹಾಗೂ ಸಾಲ ನೀಡಿಕೆಯಂಥ ವಿಭಿನ್ನ ಸೇವೆಗಳನ್ನು ಒದಗಿಸಲು ಸಜ್ಜುಗೊಳಿಸಲಾಗುತ್ತಿದ್ದು, ಬೇರುಮಟ್ಟದಲ್ಲಿ ಅವರನ್ನು ಹಣಕಾಸು ಪ್ರವೇಶ ಮತ್ತು ಆರ್ಥಿಕ ಪ್ರಗತಿಯಲ್ಲಿ ಪ್ರಮುಖ ಚಾಲಕ ಶಕ್ತಿಯನ್ನಾಗಿಸಲು ನಾವು ಅವರನ್ನು ಸಬಲೀಕರಣಗೊಳಿಸುತ್ತಿದ್ದೇವೆ” ಎಂದು ಹೇಳಿದ್ದಾರೆ.
PayNearby ಶಾಖಾರಹಿತ ಬ್ಯಾಂಕಿಂಗ್ ವ್ಯವಸ್ಥೆ ಹಾಗೂ ಡಿಜಿಟಲ್ ಜಾಲವಾಗಿದ್ದು, B2B2C ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಸಂಸ್ಥೆಯು ಕಿರಾಣಿ ಅಂಗಡಿಗಳು, ಔಷಧ ಅಂಗಡಿಗಳು, ಟ್ರಾವೆಲ್ ಏಜೆಂಟ್ ಗಳು ಹಾಗೂ ಇನ್ನಿತರರನ್ನು ಒಳಗೊಂಡಂತೆ 10 ಲಕ್ಷಕ್ಕೂ ಹೆಚ್ಚು ಚಿಲ್ಲರೆ ಸಂಪರ್ಕ ಕೇಂದ್ರಗಳನ್ನು ಹೊಂದಿದೆ.