ವಿವಾದಿತ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ವಿರುದ್ಧ ಪ್ರಕರಣ ದಾಖಲಿಸಿದ ಯುಪಿಎಸ್ಸಿ
ಪೂಜಾ ಖೇಡ್ಕರ್ (Credit: X/@oldschoolmonk)
ಹೊಸದಿಲ್ಲಿ: ಕೇಂದ್ರ ಲೋಕಸೇವಾ ಆಯೋಗ ಪರೀಕ್ಷೆಗಳಲ್ಲಿ ತೇರ್ಗಡೆಗೊಳ್ಳಲು ಅಂಗವಿಕಲತೆ ಪ್ರಮಾಣಪತ್ರಗಳನ್ನು ಫೋರ್ಜರಿ ಮಾಡಿದ ಆರೋಪದ ಹಿನ್ನೆಲೆಯಲ್ಲಿ ತನಿಖೆ ಎದುರಿಸುತ್ತಿರುವ ಪ್ರೊಬೇಷನರಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ವಿರುದ್ಧ ಯುಪಿಎಸ್ಸಿ ಇಂದು ಪ್ರಕರಣ ದಾಖಲಿಸಿದೆ. ಆಕೆಯು ವಂಚನೆಗೈದಿದ್ದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಆಕೆಯ ಆಯ್ಕೆಯನ್ನು ರದ್ದುಗೊಳಿಸುವ ಕುರಿತಂತೆ ಹಾಗೂ ಭವಿಷ್ಯದ ಪರೀಕ್ಷೆಗಳಿಂದ ಆಕೆಯನ್ನು ಅನರ್ಹಗೊಳಿಸುವ ಕುರಿತಂತೆ ಆಯೋಗ ಆಕೆಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿದೆ.
ಮೂವತ್ತೆರಡು ವರ್ಷದ ಪೂಜಾ ಜೂನ್ 2024ರಲ್ಲಿ ಪುಣೆ ಕಲೆಕ್ಟರೇಟ್ಗೆ ಪ್ರೊಬೇಷನರಿ ಅಧಿಕಾರಿಯಾಗಿ ಸೇರ್ಪಡೆಗೊಂಡಿದ್ದರು. ಒಬಿಸಿ ಮತ್ತು ಅಂಗವೈಕಲ್ಯತೆ ಇರುವ ವ್ಯಕ್ತಿಗಳಿಗಾಗಿನ ಮೀಸಲಾತಿಯನ್ನು ದುರ್ಬಳಕೆ ಮಾಡಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆಂಬ ಆರೋಪ ಆಕೆಯ ಮೇಲಿದೆ.
ಆಕೆಯ ಡಿಸ್ಟ್ರಿಕ್ಟ್ ತರಬೇತಿ ಕಾರ್ಯಕ್ರಮವನ್ನು ಇತ್ತೀಚೆಗೆ ಲಾಲ್ ಬಹದ್ದೂರ್ ಶಾಸ್ತ್ರಿ ನ್ಯಾಷನಲ್ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಶನ್ ತಡೆಹಿಡಿದಿತ್ತಲ್ಲದೆ ಆಕೆಗೆ ಅಕಾಡೆಮಿಗೆ ವಾಪಸಾಗುವಂತೆ ಸೂಚಿಸಿತ್ತು.