ಯುಪಿಎಸ್ಸಿ | ವಂಚನೆ ತಡೆಗೆ ಅಭ್ಯರ್ಥಿಗಳ ಮುಖ ಗುರುತಿಸುವಿಕೆ, ಆಧಾರ್ ಆಧರಿತ ದೃಢೀಕರಣ ಬಳಕೆ
UPSC | PC : scroll.in
ಹೊಸದಿಲ್ಲಿ : ಕೇಂದ್ರ ಲೋಕಸೇವಾ ಆಯೋಗ (ಯಪಿಎಸ್ಸಿ)ವು ವಂಚನೆಗಳನ್ನು ತಡೆಯಲು ಅಭ್ಯರ್ಥಿಗಳ ಆಧಾರ್ ಆಧರಿತ ಬೆರಳಚ್ಚು ದೃಢೀಕರಣ,ಮುಖ ಗುರುತಿಸುವಿಕೆ ಮತ್ತು ಭದ್ರತಾ ಕ್ಯಾಮೆರಾ ಕಣ್ಗಾವಲುಗಳೊಂದಿಗೆ ತನ್ನ ಪರೀಕ್ಷಾ ವ್ಯವಸ್ಥೆಯಲ್ಲಿ ತಾಂತ್ರಿಕ ನವೀಕರಣಗಳನ್ನು ತರಲು ಯೋಜಿಸುತ್ತಿದೆ.
ಆಯೋಗವು ಪರೀಕ್ಷೆಗಳ ಮೂಲಕ ಅಖಿಲ ಭಾರತ ಸೇವೆಗಳು ಮತ್ತು ಕೇಂದ್ರ ನಾಗರಿಕ ಸೇವೆಗಳಿಗೆ ಅಧಿಕಾರಿಗಳನ್ನು ನೇಮಕ ಮಾಡುವ ಸಾಂವಿಧಾನಿಕ ಸಂಸ್ಥೆಯಾಗಿದೆ.
ಮೋಸ, ವಂಚನೆ, ಅನ್ಯಾಯದ ವಿಧಾನಗಳು ಮತ್ತು ಬದಲಿ ಅಭ್ಯರ್ಥಿ ಬಳಕೆಯನ್ನು ತಡೆಯಲು ಪರೀಕ್ಷೆಗಳ ಸಂದರ್ಭದಲ್ಲಿ ಅಭ್ಯರ್ಥಿಗಳ ಬಯೊಮೆಟ್ರಿಕ್ ವಿವರಗಳನ್ನು ತಾಳೆ ನೋಡಲು ಮತ್ತು ಕ್ರಾಸ್-ಚೆಕ್ ಮಾಡಲು ತಂತ್ರಜ್ಞಾನವನ್ನು ಬಳಸಲಾಗುವುದು ಎಂದು ಆಯೋಗವು ತನ್ನ ಟೆಂಡರ್ ದಾಖಲೆಯಲ್ಲಿ ತಿಳಿಸಿದೆ.
ಆಯೋಗವು ಆನ್ಲೈನ್ ನೋಂದಣಿ ಸಂದರ್ಭದಲ್ಲಿ ಸಲ್ಲಿಸಿದ ಅಭ್ಯರ್ಥಿಯ ದತ್ತಾಂಶಗಳು ಮತ್ತು ಭಾವಚಿತ್ರಗಳನ್ನು ಆಧಾರ್ ಆಧರಿತ ಬೆರಳಚ್ಚು ದೃಢೀಕರಣ ಮತ್ತು ಮುಖ ಗುರುತಿಸುವಿಕೆಗಾಗಿ ಸೇವಾ ಪೂರೈಕೆದಾರರೊಂದಿಗೆ ಹಂಚಿಕೊಳ್ಳಲಿದೆ.
ಅಭ್ಯರ್ಥಿಗಳ ಗುರುತನ್ನು ಪರಿಶೀಲಿಸಲು ಮತ್ತು ಬದಲಿ ಅಭ್ಯರ್ಥಿ ಬಳಕೆಯನ್ನು ತಡೆಯಲು ಪರೀಕ್ಷಾ ಕೇಂದ್ರಗಳಲ್ಲಿ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುವುದು ಎಂದು ಆಯೋಗವು ತಿಳಿಸಿದೆ.
ಯುಪಿಎಸ್ಸಿ ಒದಗಿಸಿರುವ ಅಪ್ಲಿಕೇಶನ್ ಡೇಟಾಬೇಸ್ನಿಂದ ಅಭ್ಯರ್ಥಿಯ ವಿವರಗಳನ್ನು ಸ್ವಯಂಚಾಲಿತವಾಗಿ ಪಡೆದುಕೊಳ್ಳಲು ಅಭ್ಯರ್ಥಿಗಳ ನಂಬರ್ಗಳಿರುವ ಪ್ರವೇಶ ಪತ್ರದಲ್ಲಿರುವ ಕ್ಯೂಆರ್ ಕೋಡ್ನ್ನು ಸ್ಕ್ಯಾನ್ ಮಾಡಬೇಕು. ಕ್ಯೂಆರ್ ಕೋಡ್ನ್ನು ಸ್ಕ್ಯಾನ್ ಮಾಡಲಾಗದಿದ್ದರೆ ಅಭ್ಯರ್ಥಿಯ ಪ್ರವೇಶ ಪತ್ರದಲ್ಲಿಯ ರೋಲ್ ನಂಬರ್ನ್ನು ಕೈಯಿಂದ ನಮೂದಿಸಬೇಕು ಎಂದು ಟೆಂಡರ್ ದಾಖಲೆಯಲ್ಲಿ ತಿಳಿಸಲಾಗಿದೆ.
ದೇಶಾದ್ಯಂತ ಪರೀಕ್ಷಾ ಕೇಂದ್ರಗಳಲ್ಲಿ ಅಭ್ಯರ್ಥಿಗಳು ಮತ್ತು ಅಲ್ಲಿ ನಿಯೋಜಿಸಲಾದ ಇತರ ವ್ಯಕ್ತಿಗಳ ವಿವಿಧ ಚಟುವಟಿಕೆಗಳ ಮೇಲೆ ನಿಗಾಯಿರಿಸಲು ರೆಕಾರ್ಡಿಂಗ್ ಮತ್ತು ನೇರ ಪ್ರಸಾರ ವ್ಯವಸ್ಥೆಯೊಂದಿಗೆ ಸಿಸಿಟಿವಿ/ವೀಡಿಯೊ ಕಣ್ಗಾವಲನ್ನು ಕಾರ್ಯಗತಗೊಳಿಸಲು ತಾನು ಯೋಜಿಸುತ್ತಿದ್ದೇನೆ ಎಂದೂ ಆಯೋಗವು ಪ್ರಕಟಿಸಿದೆ.
ಟೆಂಡರ್ ದಾಖಲೆಯ ಪ್ರಕಾರ ಸೇವಾ ಪೂರೈಕೆದಾರರು ಸಾಕಷ್ಟು ಸಂಖ್ಯೆಯಲ್ಲಿ ಭದ್ರತಾ ಕ್ಯಾಮೆರಾಗಳನ್ನು ಸ್ಥಾಪಿಸಬೇಕಾಗುತ್ತದೆ ಮತ್ತು ಆಯೋಗದ ನಿಯಂತ್ರಣ ಕೊಠಡಿಯಲ್ಲಿ ವೀಡಿಯೊದ ನೇರ ವೀಕ್ಷಣೆಯನ್ನು ಸಾಧ್ಯವಾಗಿಸಬೇಕಾಗುತ್ತದೆ.
ಈ ನವೀಕರಣ ಕಾರ್ಯಗಳನ್ನು ಸೇವಾ ಪೂರೈಕೆದಾರರಿಗೆ ವಹಿಸಲು ಟೆಂಡರ್ ಪ್ರಕ್ರಿಯೆಯು ಜು.16ರಿಂದ ಆರಂಭಗೊಂಡಿದೆ.
ಪ್ರೊಬೇಷನರಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ವಿರುದ್ಧ ವಂಚನೆ ಆರೋಪಗಳ ನಡುವೆ ಈ ಬೆಳವಣಿಗೆ ನಡೆದಿದೆ. 12 ಸಲ ಸಿವಿಲ್ ಸರ್ವಿಸಸ್ ಪರೀಕ್ಷೆಗೆ ಹಾಜರಾಗಲು ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದ ಆರೋಪಗಳನ್ನು ಖೇಡ್ಕರ್ ಎದುರಿಸುತ್ತಿದ್ದು, ಇದು ಅನುಮತಿಸಲಾದ ಪ್ರಯತ್ನಗಳ ಸಂಖ್ಯೆಗಿಂತ ತುಂಬ ಹೆಚ್ಚಾಗಿದೆ. ಆಯೋಗವು ಅವರ ವಿರುದ್ಧ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಿದೆ.