ಅದಾನಿ ಮೇಲಿನ ದೋಷಾರೋಪಣೆ ಕುರಿತು ತನಿಖೆಗೆ ಭಾರತೀಯ ಏಜೆನ್ಸಿಗಳಿಗೆ ನಿರ್ದೇಶಿಸುವಂತೆ ಕೋರಿ ಸುಪ್ರೀಂಕೋರ್ಟ್ ಗೆ ಅರ್ಜಿ
ಸುಪ್ರೀಂ ಕೋರ್ಟ್ | PC : PTI
ಹೊಸದಿಲ್ಲಿ: ಉದ್ಯಮಿ ಗೌತಮ್ ಅದಾನಿ ವಿರುದ್ಧದ ಲಂಚ ಮತ್ತು ವಂಚನೆ ಆರೋಪದ ಕುರಿತು ಭಾರತೀಯ ಏಜೆನ್ಸಿಗಳಿಗೆ ತನಿಖೆಗೆ ನಿರ್ದೇಶಿಸಬೇಕೆಂದು ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿದೆ.
ಯುನೈಟೆಡ್ ಸ್ಟೇಟ್ಸ್ ಡಿಪಾರ್ಟ್ಮೆಂಟ್ ಆಫ್ ಜಸ್ಟಿಸ್ ಗೌತಮ್ ಅದಾನಿ ಮತ್ತು ಇತರರ ವಿರುದ್ಧ ಲಂಚ ಮತ್ತು ವಂಚನೆ ಆರೋಪ ಮಾಡಿತ್ತು. ದೋಷಾರೋಪಣೆ ಬೆನ್ನಲ್ಲೇ ಅದಾನಿ ಮತ್ತು ಇತರರ ವಿರುದ್ಧ ನ್ಯೂಯಾರ್ಕ್ ನ್ಯಾಯಾಲಯ ಅರೆಸ್ಟ್ ವಾರೆಂಟ್ ಜಾರಿಗೊಳಿಸಿತ್ತು.
ಅದಾನಿ ಸಮೂಹದ ವಿರುದ್ಧ ಹಿಂಡೆನ್ ಬರ್ಗ್ ಮಾಡಿರುವ ಆರೋಪಗಳ ಕುರಿತು ಸ್ವತಂತ್ರ ತನಿಖೆ ನಡೆಸುವಂತೆ ಕೋರಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದ ವಕೀಲ ವಿಶಾಲ್ ತಿವಾರಿ ಈ ಪ್ರಕರಣದಲ್ಲಿ ಕೂಡ ಅರ್ಜಿಯನ್ನು ಸಲ್ಲಿಸಿದ್ದಾರೆ.
ಯುನೈಟೆಡ್ ಸ್ಟೇಟ್ಸ್ ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಕಮಿಷನ್ ನ ದೂರು ಮತ್ತು ಯುಎಸ್ ನ್ಯಾಯಾಂಗ ಇಲಾಖೆಯ ಆದೇಶವು ಅದಾನಿ ಸಮೂಹದ ಸಂಘಟಿತ ದುಷ್ಕೃತ್ಯಗಳನ್ನು ಅನಾವರಣಗೊಳಿಸಿದೆ. ಆರೋಪಗಳು ಗಂಭೀರ ಸ್ವರೂಪದ್ದಾಗಿದ್ದು, ಈ ಕುರಿತು ದೇಶದ ಹಿತದೃಷ್ಟಿಯಿಂದ ಭಾರತೀಯ ಏಜೆನ್ಸಿಗಳಿಂದ ತನಿಖೆಯಾಗಬೇಕು ಎಂದು ಹೇಳಿದ್ದಾರೆ.
ಇದಲ್ಲದೆ 2024 ಜನವರಿ 3ರ ಸುಪ್ರೀಂ ಕೋರ್ಟ್ ಆದೇಶದಂತೆ ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ(ಸೆಬಿ) ಅದಾನಿ ಕಂಪನಿಗಳ ವಿರುದ್ಧ ತನಿಖೆಯನ್ನು ಇನ್ನು ಕೂಡ ಮುಕ್ತಾಯಗೊಳಿಸಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.