ಎರಡು ಕ್ರಿಮಿನಲ್ ಪ್ರಕರಣಗಳಲ್ಲಿ ಪುತ್ರ ಹಂಟರ್ ಗೆ ಕ್ಷಮಾದಾನ ನೀಡಿದ ಅಮೆರಿಕ ಅಧ್ಯಕ್ಷ ಜೋ ಬೈಡನ್
ಅಧಿಕಾರದ ದುರ್ಬಳಕೆ ಎಂದ ಟ್ರಂಪ್
ವಾಶಿಂಗ್ಟನ್: ತೆರಿಗೆ ವಂಚನೆ ಪ್ರಕರಣದಲ್ಲಿ ತಪ್ಪೊಪ್ಪಿಕೊಂಡಿರುವ ಹಾಗೂ ಬಂದೂಕುಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿರುವ ತಮ್ಮ ಪುತ್ರ ಹಂಟರ್ ಬೈಡನ್ ಗೆ ಕ್ಷಮಾದಾನ ನೀಡಿರುವುದಾಗಿ ರವಿವಾರ ಅಮೆರಿಕ ಅಧ್ಯಶಕ್ಷ ಜೋ ಬೈಡನ್ ಹೇಳಿದ್ದಾರೆ. ಇದಕ್ಕೂ ಮುನ್ನ, ನಾನು ನನ್ನ ಪುತ್ರನ ವಿರುದ್ಧ ನಡೆಯುತ್ತಿರುವ ಕಾನೂನು ಪ್ರಕ್ರಿಯೆಗಳ ನಡುವೆ ಮಧ್ಯಪ್ರವೇಶಿಸುವುದಿಲ್ಲ ಎಂದು ಜೋ ಬೈಡನ್ ಭರವಸೆ ನೀಡಿದ್ದರು.
“ಇಂದು ನಾನು ನನ್ನ ಪುತ್ರ ಹಂಟರ್ ಗೆ ಕ್ಷಮಾದಾನ ನೀಡುವ ಕಡತಕ್ಕೆ ಸಹಿ ಮಾಡಿದ್ದೇನೆ. ನಾನು ಅಧ್ಯಕ್ಷ ಹುದ್ದೆಗೇರಿದಾಗಿನಿಂದ, ನ್ಯಾಯಾಂಗ ಇಲಾಖೆಯ ನಿರ್ಣಯದ ನಡುವೆ ಮಧ್ಯಪ್ರವೇಶಿಸುವುದಿಲ್ಲ ಎಂದು ಹೇಳಿದ್ದೆ ಹಾಗೂ ನನ್ನ ಪುತ್ರನನ್ನು ಗುರಿಯಾಗಿಸಿಕೊಂಡು, ಅನ್ಯಾಯಯುತವಾಗಿ ಶಿಕ್ಷೆಗೊಳಪಡಿಸುತ್ತಿರುವುದನ್ನು ಕಂಡಾಗಲೂ ನಾನು ನನ್ನ ಭರವಸೆಯನ್ನು ಉಳಿಸಿಕೊಂಡಿದ್ದೆ” ಎಂದು ಪತ್ರಿಕಾ ಪ್ರಕಟಣೆಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.
ಹಂಟರ್ ಗೆ ಬೈಡನ್ ಕ್ಷಮಾದಾನ ನೀಡುವುದಿಲ್ಲ ಅಥವಾ ಅವರ ಶಿಕ್ಷೆಯನ್ನು ಬದಲಿಸುವುದಿಲ್ಲ ಎಂದು ಶ್ವೇತಭವನ ಪದೇ ಪದೇ ಹೇಳಿತ್ತು.
ಜನವರಿ 1, 2014ರಿಂದ ಡಿಸೆಂಬರ್ 1, 2024ವರೆಗೆ ಹಂಟರ್ ಬೈಡನ್ ಭಾಗಿಯಾಗಿರುವ ಯಾವುದೇ ಅಪರಾಧಗಳಿಗೆ ಜೋ ಬೈಡನ್ ಸಂಪೂರ್ಣ ಮತ್ತು ಬೇಷರತ್ ಕ್ಷಮಾದಾನ ಮಂಜೂರು ಮಾಡಿದ್ದಾರೆ ಎಂದು ಕ್ಷಮಾದಾನ ಮಂಜೂರಾತಿ ಆದೇಶದಲ್ಲಿ ಹೇಳಲಾಗಿದೆ.
ಸುಳ್ಳು ಹೇಳಿಕೆಗಳು ಹಾಗೂ ಬಂದೂಕು ಪ್ರಕರಣದಲ್ಲಿ ಹಂಟರ್ ಬೈಡನ್ ಈ ತಿಂಗಳು ಶಿಕ್ಷೆಗೆ ಗುರಿಯಾಗಿದ್ದರು. ಮಾದಕ ದ್ರವ್ಯಗಳು, ಲೈಂಗಿಕ ಕಾರ್ಯಕರ್ತೆಯರು ಹಾಗೂ ಐಷಾರಾಮಿ ವಸ್ತುಗಳಿಗೆ ಆಡಂಬರದಿಂದ ಖರ್ಚು ಮಾಡುವಾಗ, ನಾನು 1.4 ದಶಲಕ್ಷ ಡಾಲರ್ ತೆರಿಗೆ ಪಾವತಿಸುವಲ್ಲಿ ವಿಫಲಗೊಂಡಿದ್ದೆ ಎಂದು ತಮ್ಮ ವಿರುದ್ಧ ಫೆಡರಲ್ ತನಿಖಾ ಸಂಸ್ಥೆಗಳು ಹೊರಿಸಿದ್ದ ದೋಷಾರೋಪ ಪ್ರಕರಣದಲ್ಲಿ ಹಂಟರ್ ತಪ್ಪೊಪ್ಪಿಕೊಂಡಿದ್ದರು. ಈ ಪ್ರಕರಣದಲ್ಲಿ ಡಿಸೆಂಬರ್ 16ರಂದು ಹಂಟರ್ ಶಿಕ್ಷೆಯ ಪ್ರಮಾಣ ಪ್ರಕಟವಾಗಲಿತ್ತು.
ಜೋ ಬೈಡನ್ ಕ್ರಮವನ್ನು ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ರಿಪಬ್ಲಿಕನ್ನರು ಟೀಕಿಸಿದ್ದಾರೆ. “ಜೋ ಬೈಡನ್ ಅಧಿಕಾರದ ದುರ್ಬಳಕೆ ಮಾಡಿದ್ದಾರೆ” ಎಂದು ಡೊನಾಲ್ಡ್ ಟ್ರಂಪ್ ವಾಗ್ದಾಳಿ ನಡೆಸಿದ್ದಾರೆ