ಅಮೆರಿಕ ಅಧ್ಯಕ್ಷೀಯ ಚುನಾವಣೆ | ಹಿಂದೂ ರಿಪಬ್ಲಿಕನ್ ಗುಂಪಿನೊಂದಿಗೆ ಪಕ್ಷದ ನಾಯಕರ ಆನ್ ಲೈನ್ ಸಭೆ; ಅಂತರ ಕಾಯ್ದುಕೊಂಡ ಬಿಜೆಪಿ
ವಿಜಯ್ ಜಾಲಿ | PC : X/@VijayJollyBJP
ಹೊಸದಿಲ್ಲಿ: ಭಾರತೀಯ ಜನತಾ ಪಕ್ಷವು ಬುಧವಾರ ಅಮೆರಿಕದಲ್ಲಿ ರಿಪಬ್ಲಿಕನ್ ಹಿಂದೂ ಒಕ್ಕೂಟದ ಅಧ್ಯಕ್ಷರೊಂದಿಗೆ ತನ್ನ ಪಕ್ಷದ ನಾಯಕ ಆಯೋಜಿಸಿದ್ದ ಆನ್ಲೈನ್ ಕಾರ್ಯಕ್ರಮದಿಂದ ಅಂತರ ಕಾಯ್ದುಕೊಂಡಿದೆ. ಅಮೆರಿಕದಲ್ಲಿ ಮುಂಬರುವ ಅಧ್ಯಕ್ಷೀಯ ಚುನಾವಣೆಯಲ್ಲಿ ತಾನು ಯಾವುದೇ ಅಭ್ಯರ್ಥಿಗಳನ್ನು ಬೆಂಬಲಿಸುವುದಿಲ್ಲ ಅಥವಾ ವಿರೋಧಿಸುವುದಿಲ್ಲ ಎಂದು ಹೇಳಿದೆ.
ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಯು ನವೆಂಬರ್ 5 ರಂದು ನಡೆಯಲಿದೆ. ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿದ್ದರೆ, ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಿಪಬ್ಲಿಕನ್ ಪಕ್ಷವನ್ನು ಪ್ರತಿನಿಧಿಸುತ್ತಿದ್ದಾರೆ.
ರಿಪಬ್ಲಿಕನ್ ಹಿಂದೂ ಒಕ್ಕೂಟವನ್ನು 2015 ರಲ್ಲಿ ಹಿಂದೂ-ಅಮೇರಿಕನ್ ಸಮುದಾಯ ಮತ್ತು ರಿಪಬ್ಲಿಕನ್ ರಾಜ ತಾಂತ್ರಿಕರ ನಡುವಿನ ವಿಶಿಷ್ಟ ಸೇತುವೆ ನಿರ್ಮಾಣಕ್ಕೆ ಸ್ಥಾಪಿಸಲಾಯಿತು.
ರಿಪಬ್ಲಿಕನ್ ಹಿಂದೂ ಒಕ್ಕೂಟದ ಅಧ್ಯಕ್ಷ ಶಲಭ್ ಕುಮಾರ್ ಅವರೊಂದಿಗೆ ದೆಹಲಿಯ ಮಾಜಿ ಶಾಸಕ ವಿಜಯ್ ಜಾಲಿ ಅವರು ಆಯೋಜಿಸುತ್ತಿರುವ ಆನ್ಲೈನ್ ಸಭೆಗೂ ಬಿಜೆಪಿ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಬಿಜೆಪಿಯ ವಿದೇಶಾಂಗ ವ್ಯವಹಾರಗಳ ಘಟಕದ ಮುಖ್ಯಸ್ಥ ವಿಜಯ್ ಚೌತೈವಾಲೆ ಬುಧವಾರ ಹೇಳಿದ್ದಾರೆ.
ಬಿಜೆಪಿಯ ಹಿರಿಯ ನಾಯಕ ವಿಜಯ್ ಜಾಲಿ ಅವರು ಅಮೆರಿಕ ಚುನಾವಣೆಯ ಇಬ್ಬರು ಪ್ರಮುಖ ಅಧ್ಯಕ್ಷೀಯ ಅಭ್ಯರ್ಥಿಗಳಲ್ಲಿ ಒಬ್ಬರನ್ನು ಬೆಂಬಲಿಸುವ ಆನ್ಲೈನ್ ಸಭೆಯನ್ನು ಆಯೋಜಿಸುತ್ತಿದ್ದಾರೆ ಎಂದು ನನ್ನ ಗಮನಕ್ಕೆ ತರಲಾಗಿದೆ ಎಂದು ಚೌತೈವಾಲೆ ಸಾಮಾಜಿಕ ಮಾಧ್ಯಮದಲ್ಲಿ ಹೇಳಿದ್ದಾರೆ. ಈ ಘಟನೆಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಅಮೆರಿಕದ ಅಧ್ಯಕ್ಷೀಯ ಚುನಾವಣೆಗಳು ಆಂತರಿಕ ವಿಷಯ ಎಂದು ಬಿಜೆಪಿಯು ಈಗಾಗಲೇ ಸ್ಪಷ್ಟಪಡಿಸಿದೆ ಎಂದು ಚೌತೈವಾಲೆ ಹೇಳಿದರು. ಬಿಜೆಪಿ ಅಮೆರಿಕದಲ್ಲಿ ಯಾವುದೇ ಅಭ್ಯರ್ಥಿಯನ್ನು ಬೆಂಬಲಿಸುವುದಿಲ್ಲ ಅಥವಾ ವಿರೋಧಿಸುವುದಿಲ್ಲ ಎಂದು ಅವರು ಹೇಳಿದರು.
ದೆಹಲಿಯ ಸಾಕೇತ್ ಅಸೆಂಬ್ಲಿ ಕ್ಷೇತ್ರವನ್ನು ಪ್ರತಿನಿಧಿಸುವ ಜಾಲಿ ಅವರು ದ್ವಿಪಕ್ಷೀಯ ವೇದಿಕೆಯಾದ ದೆಹಲಿ ಸ್ಟಡಿ ಸರ್ಕಲ್ನ ಆಶ್ರಯದಲ್ಲಿ ಸಭೆಯನ್ನು ಆಯೋಜಿಸುತ್ತಿದ್ದಾರೆ ಎಂದು The Hindu ಗೆ ಅವರು ತಿಳಿಸಿದರು.