ಅದಾನಿ ವಿರುದ್ಧದ ತನಿಖೆಗೆ ಭಾರತದ ಸಹಾಯ ಕೋರಿದ ಅಮೆರಿಕದ ಆಯೋಗ: ವರದಿ

ಗೌತಮ್ ಅದಾನಿ (Photo: PTI)
ಹೊಸದಿಲ್ಲಿ: ಸೌರ ವಿದ್ಯುತ್ ಗುತ್ತಿಗೆಗೆ ಸಂಬಂಧಿಸಿ 2,237 ಕೋಟಿ ರೂ. ಲಂಚ ಮತ್ತು ವಂಚನೆ ಆರೋಪದ ಕುರಿತಂತೆ ಕೈಗಾರಿಕೋದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ವಿರುದ್ಧ ತನಿಖೆಗೆ ಯುಎಸ್ ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಕಮಿಷನ್(SEC) ಭಾರತ ಸರಕಾರದ ಸಹಾಯವನ್ನು ಕೋರಿದೆ ಎಂದು ನ್ಯಾಯಾಲಯದ ದಾಖಲೆಗಳು ತೋರಿಸುತ್ತದೆ ಎಂದು ರಾಯ್ಟರ್ಸ್ (Reuters) ವರದಿ ಮಾಡಿದೆ.
ಸೌರ ವಿದ್ಯುತ್ ಗುತ್ತಿಗೆ ಪಡೆದುಕೊಳ್ಳಲು ಭಾರತೀಯ ಸರಕಾರಿ ಅಧಿಕಾರಿಗಳಿಗೆ 2,237 ಕೋಟಿ ರೂ. ಲಂಚ ನೀಡಿದ ಆರೋಪದ ಮೇಲೆ ಕೈಗಾರಿಕೋದ್ಯಮಿ ಗೌತಮ್ ಅದಾನಿ ಮತ್ತು ಇತರ ಏಳು ಮಂದಿ ವಿರುದ್ಧ ಯುಎಸ್ ಪ್ರಾಸಿಕ್ಯೂಟರ್ ಗಳು ದೋಷಾರೋಪಣೆ ಸಲ್ಲಿಕೆ ಮಾಡಿದ್ದರು.
ಮಂಗಳವಾರ ನ್ಯೂಯಾರ್ಕ್ ಜಿಲ್ಲಾ ನ್ಯಾಯಾಲಯದ ದಾಖಲೆ ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದ್ದು, ಗೌತಮ್ ಅದಾನಿ ಮತ್ತು ಸಾಗರ್ ಅದಾನಿ ಅವರಿಗೆ ದೂರಿನ ಪ್ರತಿ ನೀಡಲು ಯುಎಸ್ ಸೆಕ್ಯುರಿಟೀಸ್ ಭಾರತದ ಕಾನೂನು ಮತ್ತು ನ್ಯಾಯ ಸಚಿವಾಲಯದಿಂದ ಸಹಾಯವನ್ನು ಕೇಳಿದೆ. ಗೌತಮ್ ಅದಾನಿ ಮತ್ತು ಸಾಗರ್ ಅದಾನಿ ಭಾರತದಲ್ಲಿದ್ದು ಅಮೆರಿಕದ ವಶದಲ್ಲಿಲ್ಲ ಎಂದು ಹೇಳಿದೆ.
ಇದಲ್ಲದೆ ಅದಾನಿ ಮತ್ತು ಅವರ ವಕೀಲರನ್ನು ಸಂಪರ್ಕಿಸಿದ್ದೇವೆ ಮತ್ತು ಮೊಕದ್ದಮೆಯ ಬಗ್ಗೆ ನೋಟಿಸ್ ಕಳುಹಿಸಿದ್ದೇವೆ ಎಂದು ಅಧಿಕಾರಿಗಳು ಹೇಳಿರುವ ಬಗ್ಗೆ ರಾಯ್ಟರ್ಸ್ ವರದಿಯಲ್ಲಿ ಉಲ್ಲೇಖಿಸಿದೆ.